ಭಾರತ ಕಂಡ ಅಸಾಮಾನ್ಯ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಕಟ್ಟಿ ‘ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಈ ಮಹಾನ್ ನಾಯಕ ನಮಗೆ ಎಂದೆಂದಿಗೂ ಸ್ಪೂರ್ತಿ. ಭಾರತೀಯರೆಲ್ಲರ ಪ್ರೀತಿಯ ‘ನೇತಾಜಿ’ ಸಣ್ಣ ವಯಸ್ಸಿನಲ್ಲಿಯೇ ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರ ಸಾಹಿತ್ಯಗಳಿಂದ ಪ್ರಭಾವಿತರಾಗಿದ್ದರು. ವಿದೇಶದಲ್ಲಿ ಕೆಲಸ ಮಾಡಲು ಒಪ್ಪದ ಬೋಸ್ ತಾವು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಅವರನ್ನು ನೆನೆದರೇ ಸಾಕು ದೇಶಪ್ರೇಮ ಉಕ್ಕುತ್ತದೆ ಎಂದು ಹೇಳಿದರು.
ಶಿಕ್ಷಕ ಚಾಂದ್ ಪಾಷ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಔರ ಜೀವನದ ವಿವಿಧ ಘಟನೆಗಳನ್ನು ಮಕ್ಕಳಿಗೆ ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಜಿಲ್ಲೆಯು ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವಿಭಾಜ್ಯ ಜಿಲ್ಲೆಯ ಬಗ್ಗೆ ಮತ್ತು ಜಿಲ್ಲೆಯ ವೈಶಿಷ್ಟ್ಯತೆಯ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ಅವರನ್ನು ಗೌರವಿಸಲಾಯಿತು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಎಸ್ಡಿಎಂಸಿ ಅಧ್ಯಕ್ಷೆ ಪುಷ್ಪ, ಸದಸ್ಯ ಆನಂದ್, ಹನುಮಂತರೆಡ್ಡಿ, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಪ್ರಕಾಶ್, ಬಿ.ಆರ್.ಪಿ ನಾಗೇಶ್, ಸಿ.ಆರ್.ಪಿ ನಾಗರಾಜ್, ಪಿಡಿಒ ಅಂಜನ್ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ನರಸಿಂಹಮೂರ್ತಿ, ಹರೀಶ್ಕುಮಾರ್, ವೆಂಕಟಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -