ದಿಬ್ಬೂರಹಳ್ಳಿ ರಸ್ತೆಯಲ್ಲಿ ಪಟ್ರೇನಹಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ರೂಪಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಶನಿವಾರ ಭೇಟಿ ನೀಡಿದ್ದ ಯೂನಿವರ್ಸಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಅರಣ್ಯ ರಕ್ಷಕ ಹುಸೇನಿ ನಿಂಬಾಳ್ ಅವರು ಪರಿಸರ ಪಾಠವನ್ನು ಮಾಡಿದರು.
ಕೊಡಗಿನ ದುರಂತದಿಂದ ಪಾಠ ಕಲಿತು ನಾವು ಪ್ರಕೃತಿಯ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಮರ ಗಿಡಗಳನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು.
ನೈಸರ್ಗಿಕವಾಗಿ ಬೆಳೆದ ಮರಗಳನ್ನು ಕಡಿದರೆ ಆ ಮರ ಹಿಡಿದಿಟ್ಟುಕೊಳ್ಳುವ ಮಣ್ಣು ಸಡಿಲವಾಗುತ್ತದೆ. ಮಳೆಗೆ ಆ ಮಣ್ಣು ಕೊಚ್ಚಿಕೊಂಡುಹೋಗುತ್ತದೆ. ಇದನ್ನೇ ಭೂಸವಕಳಿ ಎನ್ನುತ್ತಾರೆ. ಇದು ಹಲವು ವರ್ಷ ನಿರಂತರವಾಗಿ ನಡೆದು ಬಂದ ಹಿನ್ನೆಲೆಯಲ್ಲಿ ಈಗ ಕೆಲವು ದಿನಗಳಿದಿಂದ ಎರಗಿರುವ ದುರಂತ ನಮ್ಮ ಕಣ್ಮುಂದೆ ಉದಾಹರಣೆಯಾಗಿದೆ ಎಂದರು.
ಸಿಲ್ವರ್ ಓಕ್, ಶ್ರೀಗಂಧ, ಗ್ಲಿರಿಸಿಡಿಯಾ, ಚಿಗರೆ, ಗೇರು ಮರ, ಹುಣಸೆ, ಸಾಗುವಾನಿ, ಬೇವು, ಬಿದಿರು ಮುಂತಾದ ಮರಗಳ ಮುಂದೆ ಮಕ್ಕಳನ್ನು ಕರೆತಂದು ಮರಗಳ ವೈಜ್ಞಾನಿಕ ಹೆಸರು, ಔಷಧೀಯ ಗುಣಗಳು, ಉಪಯೋಗಗಳು ಮುಂತಾದ ಮಾಹಿತಿಯನ್ನು ತಿಳಿಸಿದರು. ಈ ಕಾಡಿನಲ್ಲಿ ಕಂಡು ಬರುವ ಚಿಟ್ಟು ಮಡಿವಾಳ, ಕಳ್ಳಿಪೀರ, ಕದಿರುಗಿಣಿ, ಮಲ್ಲಿಕಾಕ್ಷ ಮೊದಲಾದ ಹಕ್ಕಿಗಳ ಬಗ್ಗೆಯೂ ಅಲ್ಲಿರುವ ಸಚಿತ್ರ ಫಲಕಗಳನ್ನು ತೋರಿಸಿ ಮಾಹಿತಿ ನೀಡಿದರು. ಕೆಲವು ಮಕ್ಕಳು ಕೇಳಿಸಿಕೊಂಡ ಮಾಹಿತಿಯನ್ನು ಬರೆದಿಟ್ಟುಕೊಂಡರೆ, ಕೆಲವರು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು.
ಶಿಕ್ಷಕ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಎಷ್ಟೇ ಶಾಲಾ ಕೊಠಡಿಯೊಳಗೆ ಕಲಿತರೂ ಪರಿಸರದ ನಡುವೆ ಕಲಿಯಬೇಕಾದ್ದು ಬಹಳಷ್ಟಿರುತ್ತದೆ. ಅದಕ್ಕಾಗಿ ನಮ್ಮ ಶಾಲೆಗೆ ಹತ್ತಿರದಲ್ಲಿಯೇ ಇರುವ ಈ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಕರೆತಂದಿದ್ದೇವೆ. ಮರಗಿಡಗಳ ಮಹತ್ವ ಮತ್ತು ಪರಿಚಯವನ್ನು ಅರಣ್ಯ ಇಲಾಖೆಯವರಿಂದಲೇ ಸಿಕ್ಕಾಗ ಮಕ್ಕಳ ಜ್ಞಾನ ವೃದ್ಧಿಸುತ್ತದೆ ಎಂದರು.
ಶಿಕ್ಷಕರಾದ ಮಲ್ಲಿಕಾ, ನಾಸಿಯಾ ಸುಲ್ತಾನ ಹಾಜರಿದ್ದರು.
- Advertisement -
- Advertisement -
- Advertisement -