ಕಳೆದ ಐದು ತಿಂಗಳಿನಿಂದ ನಮಗೆ ಪಿಂಚಣಿ ಹಣವನ್ನು ನೀಡಿಲ್ಲವೆಂದು ನಗರದ ಸಿದ್ದಾರ್ಥನಗರ ಕಾಲೋನಿಯ ವೃದ್ದರು, ದಲಿತ ಸೇನೆಯ ಕಾರ್ಯಕರ್ತರೊಂದಿಗೆ ಅಂಚೆ ಕಚೇರಿಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಕಾಂಗ್ರೆಸ್ ಭವನದ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿಯ ಬಳಿಯಲ್ಲಿ ಪ್ರತಿಭಟನೆ ನಡೆಸಿದ ವೃದ್ದರು ಹಾಗೂ ಅಂಗವಿಕಲರು, ಕಳೆದ ಐದು ತಿಂಗಳಿನಿಂದ ನಮಗೆ ಪಿಂಚಣಿ ಹಣವನ್ನು ನೀಡುತ್ತಿಲ್ಲ, ಪ್ರತಿದಿನವೂ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ, ತಾಲ್ಲೂಕು ಕಚೇರಿಯಲ್ಲಿರುವ ಉಪಖಜಾನೆಗೆ ಹೋದರೆ, ಅಂಚೆ ಕಚೇರಿಗೆ ಕಳುಹಿಸಿದ್ದೇವೆ ಎನ್ನುತ್ತಿದ್ದಾರೆ, ಇಲ್ಲಿಗೆ ಬಂದರೆ, ಬ್ಯಾಂಕುಗಳಿಂದ ಚೆಕ್ಕುಗಳು ಬಂದಿಲ್ಲವೆನ್ನುತ್ತಾರೆ, ಜೀವನಕ್ಕೆ ತುಂಬಾ ಕಷ್ಟಕರವಾಗಿದೆ ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಲು ಹಣವಿಲ್ಲವೆಂದು ಕೆಲವು ಮಂದಿ ವೃದ್ದರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಇದೇ ವೇಳೆ ಮಾತನಾಡಿದ ದಲಿತ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್, ಪ್ರತಿತಿಂಗಳು ಅವರ ಪಿಂಚಣಿ ಹಣವನ್ನು ನೀಡದೆ ಇರುವುದರಿಂದ ವೃದ್ದರು, ಅಂಗವಿಕಲರು, ಪದೇ ಪದೇ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ, ಸರ್ಕಾರದ ಆದೇಶದಂತೆ ಖಾತೆಯನ್ನು ತೆರೆದು ಅವರ ಪಿಂಚಣಿ ಹಣವನ್ನು ಖಾತೆಗಳಿಗೆ ಜಮಾ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಖಾತೆಗಳನ್ನು ಮಾಡಿಸಿರುವ ಫಲಾನುಭವಿಗಳಿಗೂ ಪಿಂಚಣಿಯನ್ನು ಜಮಾ ಮಾಡದೆ ಇರುವುದರಿಂದ ತೀರಾ ವಯಸ್ಸಾದ ವೃದ್ದರು, ಕಚೇರಿಯ ಬಳಿಗೂ ಬರಲು ಸಾಧ್ಯವಾಗದೆ ಪರದಾಡುವಂತಾಗಿದೆ. ಪಿಂಚಣಿ ಹಣವನ್ನು ಮನೆಗಳ ಬಳಿಗೆ ತಂದು ಕೊಡಬೇಕು. ಹಣವನ್ನು ಖಾತೆಗೆ ಜಮಾ ಮಾಡುವ ಬದಲಿಗೆ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸವನ್ನು ಅಂಚೆ ಕಚೇರಿಯ ಸಿಬ್ಬಂದಿ ಮಾಡಬೇಕು ಎಂದು ಒತ್ತಾಯಿಸಿದರು.
ಅಂಚೆ ಕಚೇರಿಯ ಮುಖ್ಯಪೋಸ್ಟ್ ಮಾಸ್ಟರ್ ಪ್ರಭಾವತಿ ಮಾತನಾಡಿ, ಖಜಾನೆಯಿಂದ ಚೆಕ್ಕುಗಳು ಬಂದ ನಂತರ ಅವುಗಳನ್ನು ಬ್ಯಾಂಕುಗಳಿಗೆ ಕಳುಹಿಸಿದ ನಂತರ ಬರುವುದು ತಡವಾಗಿದೆ, ಈಗಾಗಲೇ ಮಾರ್ಚಿ ಮತ್ತು ಏಪ್ರಿಲ್ ತಿಂಗಳ ಪಿಂಚಣಿಗಳನ್ನು ಆಯಾ ಪೋಸ್ಟ್ ಮ್ಯಾನ್ಗಳ ವಶಕ್ಕೆ ನೀಡಲಾಗಿದೆ. ಅವರು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡುತ್ತಾರೆ, ಉಳಿದ ಹಣವನ್ನು ಒಂದು ವಾರದೊಳಗೆ ವಿಲೇವಾರಿ ಮಾಡಲಾಗುತ್ತದೆ, ಪೋಸ್ಟ್ ಮ್ಯಾನ್ಗಳಿಗೆ ಸ್ಟೀಡ್ ಪೋಸ್ಟ್ಗಳು ಸೇರಿದಂತೆ ಹಲವು ಕಾರ್ಯಒತ್ತಡಗಳು ಹೆಚ್ಚಾಗಿದ್ದು, ನಾಗರೀಕರು ಸಹಕಾರ ನೀಡಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದ ವೃದ್ದರನ್ನು ಸಮಾಧಾನ ಪಡಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಎಸ್.ಎಂ.ರಮೇಶ್, ಮಂಜುನಾಥ್, ಬಾಲಯ್ಯ, ಚಂದ್ರು, ಮಧುಕುಮಾರ್, ಸುಭ್ರಮಣಿ, ಬಾಲಕೃಷ್ಣ, ಟಿ.ಆರ್.ದೇವರಾಜು, ಪ್ರಕಾಶ್, ಗಂಗಾಧರ, ವೆಂಕಟರಾಜು, ಮುನಿರಾಜು, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -