21.1 C
Sidlaghatta
Thursday, July 31, 2025

ಪೊರಕೆ ತಯಾರಾಗುವ ಕಾಲ

- Advertisement -
- Advertisement -

‘ನೀರಿಲ್ಲ, ಮೇವಿಲ್ಲ, ಬೆಳೆಯಿಲ್ಲ, ಮಳೆಯಿಲ್ಲ… ಬರಗಾಲ ಸ್ವಾಮಿ, ಏನ್ಮಾಡೋದು, ಪೊರಕೆ ಮಾಡುತ್ತಾ, ಮಾರುತ್ತಾ ಜೀವನ ಮಾಡಬೇಕಾಗಿದೆ’ ಎಂದು ಒಂದೇ ಮಾತಿನಲ್ಲಿ ಹಿತ್ತಲಹಳ್ಳಿಯ ವೃದ್ಧೆ ವೆಂಕಟಲಕ್ಷ್ಮಮ್ಮ ಜನಜೀವನದ ವಾಸ್ತವತೆಯನ್ನು ತೆರೆದಿಟ್ಟರು. ಉರಿ ಬಿಸಿಲಿನಲ್ಲಿ ಹಿತ್ತಲಹಳ್ಳಿಯ ಗೇಟ್‌ ಬಳಿ ಪೊರಕೆ ಕಟ್ಟಿಗಳ ಊಗು ಉದುರಿಸುತ್ತಿದ್ದ ವೃದ್ಧೆ ವೆಂಕಟಲಕ್ಷ್ಮಮ್ಮ ಈಗ ಪೊರಕೆ ಕಡ್ಡಿಗಳು ಸಿಗುವುದು ಕೂಡ ಕಷ್ಟವಾಗಿದೆ ಎಂದು ತಿಳಿಸಿದರು.
ಹಿಂದೆ ಹೊಲಗಳ ಬದುಗಳು, ಕರಾಬು ಕಾಲುವೆ, ಕಲ್ಲುಗುಟ್ಟಗಳು ಪೊರಕೆ ಹುಲ್ಲಿಗೆ ನೆಲೆಯಾಗಿದ್ದವು. ಕಣಗಳಿದ್ದ ಕಾಲದಲ್ಲಿ ಕಣ ಆರಂಭದಿಂದ ಅಂತ್ಯದವರೆಗೆ ಪೊರಕೆಗೆ ನಿರಂತರ ಕೆಲಸ ಇರುತ್ತಿತ್ತು. ಇದರಿಂದಾಗಿ ಉಪಕಸುಬಾಗಿ ಕೂಲಿ ನಾಲಿಯ ನಡುವೆ ಕಡ್ಡಿ ಸಂಗ್ರಹಿಸಿ ಊಗು (ಹೂ) ಉದುರಿಸಿ ಒಂದಷ್ಟು ಕೈಕಾಸು ಸಂಪಾದಿಸುತ್ತಿದ್ದವರಿದ್ದರು. ಹಿಂದೆ ಒಂದೆರಡು ಗಂಟೆಗಳಲ್ಲಿ ಸಂಗ್ರಹಿಸಬಹುದಾಗಿದ್ದ ಕಡ್ಡಿ ಇಂದು ಹಿಡೀ ಹಗಲನ್ನೇ ತೆಗೆದುಕೊಳ್ಳುವಷ್ಟು ವಿರಳವಾಗಿ ಲಭ್ಯವಾಗುತ್ತಿದೆ. ಹಳ್ಳಿ ಪೊರಕೆಗಳ ಜೊತೆ ನಗರಗಳಲ್ಲಿ ತಯಾರಾಗುವ ಪೊರಕೆಗಳಿಗೆ ಸ್ಪರ್ಧಿಸಲಾಗದೆ ನಶಿಸುತ್ತಿವೆ.
ಬಲಿತ ಕಡ್ಡಿಯನ್ನು ಕೊಯ್ದು ಕಟ್ಟುಕಟ್ಟಿ ತಂದಿದ್ದ ವೆಂಕಟಲಕ್ಷ್ಮಮ್ಮ ಅದನ್ನು ಗ್ರಾಮದ ಹೊರಗೆ ಹಿತ್ತಲಹಳ್ಳಿ ಗೇಟ್‌ನ ರಸ್ತೆಯ ಬದಿ ಊಗನ್ನು ಉದುರಿಸುತ್ತಿದ್ದಾರೆ. ಇದು ಗಾಳಿಯಲ್ಲಿ ಪ್ರಸಾರಗೊಂಡು ತನ್ನ ಬಾಣದಂತಹ ಚೂಪುತುದಿಯಿಂದ ತೆಳುಚರ್ಮದ ಪ್ರಾಣಿಗಳಿಗೆ ಚುಚ್ಚಿ ನೋವನ್ನುಂಟುಮಾಡುತ್ತದೆ ಎಂದು ಮುಳ್ಳು, ಕಳ್ಳಿ, ಪೊದೆಗಳ ಮೇಲೆ ಇದನ್ನು ಉದುರಿಸುತ್ತಿದ್ದಾರೆ. ನಂತರ ಅದಕ್ಕೆ ಬೆಂಕಿ ಹಚ್ಚಿ ಸುಡುವುದಾಗಿ ಹೇಳಿದರು.
ಊಗು ಉದುರಿಸುವವರು ತಮ್ಮ ಮೈಕೈಗೆ ಬಟ್ಟೆಗಳಿಗೆ ಅದು ಮೆತ್ತಿಕೊಳ್ಳದಂತೆ ಎಚ್ಚರವಹಿಸುತ್ತಾರೆ. ಕಡ್ಡಿಗಳನ್ನು ಎಡಗೈಯಲ್ಲಿ ಹಿಡಿಯಾಗಿ ಹಿಡಿದು ಬಲಗೈಯಲ್ಲಿ ಬೆತ್ತದಂತಹ ಕೋಲು ಹಿಡಿದು ಬಡಿದು ಉದುರಿಸುತ್ತಾರೆ. ಇಲ್ಲವೇ ಎರಡೂ ಕೈಗಳಲ್ಲಿ ಕಡ್ಡಿಗಳ ಹಿಡಿ ಹಿಡಿದು ಒಂದಕ್ಕೊಂದು ಬಡಿದು ಉದುರಿಸುತ್ತಾರೆ. ಊಗು ಉದುರಿಸುವವರು ನಡು ಬಗ್ಗಿಸಿಯೇ ಉದುರಿಸಬೇಕಾಗುತ್ತದೆ. ಇಲ್ಲವೆಂದರೆ ಅದು ಅವರ ಮೈಗೆ ತಾಕಿ ಚುಚ್ಚುವುಂದುಂಟು. ಊಗು ಮುಳ್ಳಿನ ಚುಚ್ಚು ಇಂಜಕ್ಷನ್‌ಗಿಂತಲೂ ಕೊಂಚ ಹೆಚ್ಚಿನ ನೋವನ್ನು ಉಂಟುಮಾಡುತ್ತದೆ. ಹಾಗಾಗಿ ಮಕ್ಕಳು ಊಗು ಮುಳ್ಳಿಗೆ ಅಂಜುತ್ತಾರೆ. ದನಗಳು ಇದನ್ನು ಮೇಯುವುದು ಕಡಿಮೆ. ಆದರೂ ಎಳೆಯದಾಗಿದ್ದಾಗ ಬಾಯಿ ಹಾಕುವುದುಂಟು.
ಮೊದಲಾದರೆ ಸಂಕ್ರಾಂತಿ ಕಳೆಯುತ್ತಿದ್ದಂತೆ ಒಳ್ಳೆಯ ಕಡ್ಡಿಗಳು ತಾಲ್ಲೂಕಿನ ಬಯಲುಗಳಲ್ಲೇ ಸಿಗುತ್ತಿದ್ದವು. ಈಗ ಅವು ಸಿಗುತ್ತಿಲ್ಲ. ಇರುವ ಅಲ್ಪ ಸ್ವಲ್ಪ ಕಡ್ಡಿಗಳು ಬೆಳೆದಿದ್ದರೆ, ಬೆಂಕಿ ಕೊಟ್ಟುಬಿಡುತ್ತಾರೆ. ನಾನು ದೇವನಹಳ್ಳಿ ಬಳಿಯ ಬಾಗಲೂರು ಸುತ್ತ ಮುತ್ತ ಹಳ್ಳಿಗಳಿಗೆ ಹೋಗಿ ಅಲ್ಲಿ ಕಾಂಪೋಂಡ್‌ ಹಾಕಿ ಲೇಔಟ್‌ ಮಾಡಿರುವಲ್ಲಿ ಕಾಡಿಬೇಡಿ ಕಡ್ಡಿಗಳನ್ನು ಕತ್ತರಿಸಿ ಹೊರೆ ಕಟ್ಟಿ ತರುತ್ತೇನೆ. ಹೋಗಿ ಬರಲು 150 ರೂ ಖರ್ಚಾಗುತ್ತದೆ. 15 ರಿಂದ 20 ಪೊರಕೆ ಮಾಡುತ್ತೇನೆ. 13 ರೂಗಳಿಂದ 15 ರೂಗೆ ಮಾರುತ್ತೇನೆ. ಇನ್ನು ಕೇವಲ ಹತ್ತು ಹದಿನೈದು ದಿನವಷ್ಟೇ ಕಡ್ಡಿಗಳು ಸಿಗಬಹುದು. ಈ ಬಿಸಿಲಿನಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆದರೂ ಬದುಕಲು ಹೆಣಗುವುದು ತಪ್ಪದು’ ಎನ್ನುತ್ತಾರೆ ವೃದ್ಧೆ ವೆಂಕಟಲಕ್ಷ್ಮಮ್ಮ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!