ಹತ್ತಾರು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ನಡೆಯಲು ಹಾಗೂ ವೈಮನಸ್ಯಗಳುಂಟಾಗಲು ಪೋಡಿ ಆಗದಿರುವುದು ಒಂದು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಇದ್ಲೂಡು ಗ್ರಾಮದಲ್ಲಿ ಮಂಗಳವಾರ ನಡೆದ ಪೋಡಿ ಮುಕ್ತ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಹಿಸ್ಸೆಗೆ, ಒಂದು ಆರ್ಟಿಸಿ, ಒಂದು ನಕ್ಷೆ, ಯಾವುದೇ ಶುಲ್ಕವಿಲ್ಲದೇ, ಪೋಡಿ ಅಳತೆ ಮಾಡುವುದು, ಆರ್.ಟಿ.ಸಿ ಮತ್ತು ಭೂದಾಖಲೆಗಳಲ್ಲಿ ಇರುವ ಕ್ಷೇತ್ರದ ವ್ಯತ್ಯಾಸ ಸರಿಪಡಿಸುವುದು, ಗ್ರಾಮವಾರು ಬಾಕಿ ಇರುವ ಪೋಡಿ ಪ್ರಕರಣಗಳನ್ನು ಅಳತೆ ಮಾಡುವುದು ಈ ಅಭಿಯಾನದಲ್ಲಿ ನಡೆಯಲಿದೆ. ಬಹು ಮಾಲೀಕತ್ವದ ಪಹಣಿ ಪತ್ರಗಳನ್ನು ಹೊಂದಿರುವ ರೈತರಿಗೆ ಪ್ರತ್ಯೇಕ ಪಹಣಿ ನಕಾಶೆ ವಿತರಿಸುವುದು ಪೋಡಿ ಮುಕ್ತ ಅಭಿಯಾನ ಉದ್ದೇಶವಾಗಿದೆ.
ಭೂಮಾಪಕರು ಗ್ರಾಮದಲ್ಲಿ ಅಳತೆ ಕೆಲಸ ಕೈಗೊಳ್ಳಲು ಬಂದಾಗ ಅಗತ್ಯ ಮಾಹಿತಿ, ಸಹಕಾರ ನೀಡಿ, ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಭೂಮಾಪನ ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ ದಾಖಲೆಗಳೊಂದಿಗೆ ತಪ್ಪದೇ ಜಮೀನಿನಲ್ಲಿ ಹಾಜರಿದ್ದು, ಅಳತೆಗೆ ಸಹಕರಿಸಬೇಕು. ಈ ಮೂಲಕ ಭೂ ದಾಖಲೆ ನವೀಕರಿಸಿಕೊಂಡು ಜಮೀನುಗಳ ಹಕ್ಕು ಮತ್ತು ಗಡಿ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಈಗಾಗಲೇ ತಾಲ್ಲೂಕಿನ ಅಬ್ಲೂಡು ಹಾಗೂ ಬೋದಗೂರು ಗ್ರಾಮದಲ್ಲಿ ಪೋಡಿ ಮುಕ್ತ ಅಭಿಯಾನ ಪ್ರಾರಂಭವಾಗಿದ್ದು, ಹಂತಹಂತವಾಗಿ ಎಲ್ಲಾ ಗ್ರಾಮಗಳಲ್ಲೂ ನಡೆಯುತ್ತದೆ. ಪಕ್ಷಾತೀತವಾಗಿ ಎಲ್ಲರೂ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮದಲ್ಲಿ ಶಾಂತಿ, ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕು. ರೋಗಮುಕ್ತ ಗ್ರಾಮಕ್ಕಾಗಿ ಪ್ರತಿಯೊಂದು ಕುಟುಂಬವೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಗ್ರಾಮದ ನೈರ್ಮಲ್ಯೀಕರಣಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಡಿ.ಡಿ.ಎಲ್.ಆರ್. ಅಜ್ಜಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಾಮುನಿಕೃಷ್ಣಪ್ಪ, ರಾಮಚಂದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯ ವೆಂಕಟಪ್ಪ, ನಗರಸಭೆ ಸದಸ್ಯ ಅಫ್ಸರ್ಪಾಷ, ಜಗ್ಗಪ್ಪ, ವೆಂಕಟೇಶ್, ಕಂದಾಯ ನಿರೀಕ್ಷಕ ಸುಬ್ರಮಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಿಲ್ಲಾಧಿಕಾರಿಗಳಿಗೆ ಮನವಿ:
ಸತ್ತಿರುವ ರೇಷ್ಮೆ ಹುಳುಗಳ(ಪ್ಯೂಪಾ) ಅಕ್ರಮ ಸಂಸ್ಕರಣ ಘಟಕಗಳ ತೆರವು, ಕೆರೆಗಳ ಒತ್ತುವರಿ ತೆರವು ಹಾಗೂ ಕೆರೆಗಳಲ್ಲಿನ ಜಾಲಿ ಮರಗಳ ತೆರವುಗೊಳಿಸಲು ಮನವಿ ಸಲ್ಲಿಸಲಾಯಿತು.
ತಾಲ್ಲೂಕಿನ ಇದ್ಲೂಡು ಗ್ರಾಮದಲ್ಲಿ ಮಂಗಳವಾರ ನಡೆದ ಪೋಡಿ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿ ಮತ್ತು ಕನ್ನಡ ಸೇನೆ ಸದಸ್ಯರು ಜಿಲ್ಲಾಧಿಕಾರಿ ಡಾ.ಎಂ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ನಗರಸಭೆಯ ಕಸವನ್ನು ಸಂಸ್ಕರಿಸಲು ಲಕ್ಷಾಂತರ ರೂಗಳ ವೆಚ್ಚದಲ್ಲಿ ಸಂಸ್ಕರಣ ಘಟಕವನ್ನು ನಿರ್ಮಿಸಿದ್ದರೂ ಹಳೆ ಬಾವಿಗಳಿಗೆ ಕಸವನ್ನು ತುಂಬಿಸಲಾಗುತ್ತಿದೆ. ನಗರದ ಹೊರವಲಯದಲ್ಲಿ ಸತ್ತಿರುವ ರೇಷ್ಮೆ ಹುಳುಗಳ(ಪ್ಯೂಪಾ) ಸಂಸ್ಕರಣೆ ನಡೆಯುತ್ತಿದ್ದು, ಇದರ ವಾಸನೆಯಿಂದ ರೇಷ್ಮೆ ಬೆಳೆಗಳ ನಾಶ, ಅನಾರೋಗ್ಯ, ಶಾಲಾ ಕಾಲೇಜುಗಳ ಮಕ್ಕಳಿಗೂ ತೊಂದರೆಯಾಗುತ್ತಿದೆ. ಇದರ ಬಗ್ಗೆ ನಗರಸಭೆ ಕ್ರಮ ಕೈಗೊಳ್ಳುತ್ತಿಲ್ಲ. ಗೌಡನ ಕೆರೆ ಮತ್ತು ಅಮ್ಮನ ಕೆರೆಯನ್ನು ಒತ್ತುವರಿ ಮಾಡಲಾಗಿದ್ದು, ಕಾನೂನುಬದ್ಧವಾಗಿ ತೆರವುಗೊಳಿಸಬೇಕಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೆರೆಗಳಲ್ಲಿನ ಜಾಲಿ ಮರಗಳನ್ನು ತೆರವುಗೊಳಿಸಿ ಎಂದು ಕೋರಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್, ಪುರುಷೋತ್ತಮ್, ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮುರಳಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -