ಪೊಲೀಸ್ ಠಾಣೆಗೆ ದೂರು ನೀಡಲು ಬರುವಂತಹ ನಾಗರೀಕರೊಂದಿಗೆ ಉತ್ತಮವಾದ ನಡುವಳಿಕೆಯಿಂದ ವರ್ತನೆ ಮಾಡದೆ, ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಜಿ.ಕೆ.ರಾಘವೇಂದ್ರ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ದಿಬ್ಬೂರಹಳ್ಳಿ ಠಾಣೆಯ ಮುಂಭಾಗದಲ್ಲಿ ಶಾಸಕ ಎಂ.ರಾಜಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ. ಜಿ.ಕೆ. ರಾಘವೇಂದ್ರ, ಠಾಣೆಗೆ ಹೋಗುವಂತಹ ನಾಗರೀಕರೊಂದಿಗೆ ತೋರುತ್ತಿರುವ ವರ್ತನೆ ಸರಿಯಾಗಿಲ್ಲ, ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರೊಂದಿಗೆ ಶಾಮೀಲಾಗಿ ಹಣ ಮಾಡುತ್ತಿದ್ದಾರೆ, ಠಾಣೆಗೆ ದೂರು ನೀಡಲು ಹೋಗುವವರ ಮೇಲೆ ವಿನಾಕಾರಣ ಕೇಸುಗಳನ್ನು ದಾಖಲಿಸಿ, ಅವಾಚ್ಯಶಬ್ದಗಳಿಂದ ನಿಂದಿಸುವುದನ್ನು ಮಾಡುತ್ತಿದ್ದಾರೆ, ದೂರು ನೀಡಲು ಬರುವವರಿಗೆ ಹಣ ನೀಡುವಂತೆ ಒತ್ತಾಯಿಸುತ್ತಾರೆ, ಹಣ ನೀಡಲು ನಿರಾಕರಿಸುವವರನ್ನು ಠಾಣೆಗೆ ಕರೆದುಕೊಂಡು ಬಂದು ಬಟ್ಟೆಗಳನ್ನು ಬಿಚ್ಚಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ, ಇದನ್ನು ಕೇಳಲು ಹೋಗುವಂತಹ ನಾಯಕರೊಂದಿಗೆ ಉದ್ದಟತನವಾಗಿ ನಡೆದುಕೊಳ್ಳುತ್ತಿದ್ದಾರೆ, ಅಮಾಯಕ ಮಹಿಳೆಯರ ಮೇಲೆ ಕೇಸುಗಳನ್ನು ದಾಖಲಿಸಿದ್ದಾರೆ, ವೆಂಕಟೇಶ್ ಎಂಬಾತನಿಗೆ ದೈಹಿಕವಾಗಿ ಹೊಡೆದಿರುವ ಪರಿಣಾಮವಾಗಿ ಇಂದಿಗೂ ಕೂಡಾ ಆತ ಮತ್ತೊಬ್ಬರ ಸಹಾಯದಿಂದ ನಡೆದಾಡುವಂತಾಗಿದ್ದು, ಜೀವನಕ್ಕಾಗಿ ಮತ್ತೊಬ್ಬರನ್ನು ಅವಲಂಬಿಸಬೇಕಾಗಿದೆ, ಆದ್ದರಿಂದ ಸಾರ್ವಜನಿಕ ವಲಯದಲ್ಲಿ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಳ್ಳದ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಂವಿಧಾನಬದ್ಧವಾಗಿ ಎಲ್ಲಾ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿರುವ ಅಧಿಕಾರಿ ಜನರೊಂದಿಗೆ ಈ ರೀತಿಯಾಗಿ ವರ್ತನೆ ಮಾಡುತ್ತಿರುವುದು ಶೋಚನೀಯವಾದ ವಿಚಾರವಾಗಿದೆ, ಕಳೆದ ಅನೇಕ ಬಾರಿ ನಾನೇ ಸ್ವತಃ ದೂರವಾಣಿಯ ಮೂಲಕ ಕರೆ ಮಾಡಿ, ನಾಗರೀಕರ ಬಟ್ಟೆ ಬಿಚ್ಚಿಸಿ ನಿಲ್ಲಿಸಿರುವ ಬಗ್ಗೆ ವಿಚಾರಿಸಿದಾಗ ನನಗೆ ಸುಳ್ಳು ಹೇಳಿದ್ದು, ದೈಹಿಕವಾಗಿ ಬಹಳಷ್ಟು ಹಿಂಸೆ ನೀಡಿದ್ದಾರೆ, ಇವರು ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ರಾಜಕೀಯ ಪಕ್ಷಗಳ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರಾ ಎಂಬುದನ್ನು ಅಧಿಕಾರಿಗಳು ಬಹಿರಂಗ ಪಡಿಸಬೇಕು, ಕೂಡಲೇ ಜನರಿಂದ ತಿರಸ್ಕರಿಸಲ್ಪಟ್ಟಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದರು.
ಸ್ಥಳಕ್ಕೆ ಬೇಟಿ ನೀಡಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೈತ್ರಾ, ಕೂಡಲೇ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸಿ, ಇಲಾಖೆಯ ನಿಯಮದಂತೆ ತನಿಖೆ ನಡೆಸಿ, ಅವರ ಮೇಲೆ ಬಂದಿರುವ ಆರೋಪಗಳು ಸಾಬೀತಾದರೆ ಕೂಡಲೇ ಅವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಇದೇ ವೇಳೆ ಪಿ.ಎಸ್.ಐ.ರಾಘವೇಂದ್ರ ಅವರಿಂದ ಭಾದಿತರಾಗಿದ್ದಾರೆನ್ನಲಾದ ಕೆಲವು ಮಂದಿ ತಮಗಾಗಿರುವ ಅನ್ಯಾಯವನ್ನು ಬಹಿರಂಗವಾಗಿ ಹೇಳಿಕೊಂಡು ಅಧಿಕಾರಿಯ ವರ್ಗಾವಣೆಗೆ ಒತ್ತಾಯಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಡಾ.ಜಯರಾಮರೆಡ್ಡಿ, ಡಿ.ಬಿ.ವೆಂಕಟೇಶ್, ರಾಮಲಿಂಗಾರೆಡ್ಡಿ, ಬಳುವನಹಳ್ಳಿ ರಘುನಾಥ್, ಜೆ.ಎಂ.ವೆಂಕಟೇಶ್, ನಂಜಪ್ಪ, ಗಂಜಿಗುಂಟೆ ಮೂರ್ತಿ, ಮುನಿರೆಡ್ಡಿ, ವೈ.ಹುಣಸೇನಹಳ್ಳಿ ಬೇಕರಿ ಮಂಜುನಾಥ್, ವಿಜಯಕುಮಾರ್, ಸೇರಿದಂತೆ ನೂರಾರು ಮಂದಿ ನಾಗರೀಕರು ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -