ಲೋಕಸಭೆ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಗಳು ವಸತಿ ಶಾಲೆ, ವಿದ್ಯಾರ್ಥಿ ನಿಲಯದ ಮಕ್ಕಳಿಂದ ಪಾಲಕರಿಗೆ ಪತ್ರ ಬರೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ತಾಲ್ಲೂಕಿನ ಹನ್ನೊಂದನೇ ಮೈಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಸಾಮೂಹಿಕವಾಗಿ ತಮ್ಮ ತಮ್ಮ ಪಾಲಕರಿಗೆ ಅಂಚೆ ಪತ್ರ ಬರೆದು ತಪ್ಪದೆ ಮತದಾನ ಮಾಡಲು ಮನವಿ ಮಾಡಿಕೊಂಡಿದ್ದಾರೆ. ದೇಶದ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ತಪ್ಪದೇ ಮತದಾನ ಮಾಡಿ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಿ. ಒಂದೊಮ್ಮೆ ತಮ್ಮ ಹೆಸರು ಕೈಬಿಟ್ಟು ಹೋಗಿದ್ದರೆ ಈಗಲೇ ನೋಂದಾಯಿಸಿಕೊಳ್ಳಿ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಚುನಾವಣೆಯ ಮತದಾನದ ದಿನದಂದು ಉದಾಸೀನ ತೋರದೆ ಮತದಾನ ಮಾಡಿ ಎಂದು ಪತ್ರ ಬರೆದಿದ್ದಾರೆ.
ಮುಖ್ಯಶಿಕ್ಷಕಿ ತುಬ್ರಾ ಮುಬೀನ್ ಮಾತನಾಡಿ, ಪ್ರಜಾಪ್ರಭುತ್ವ ಯಶಸ್ವಿಗೊಳ್ಳಬೇಕಾದಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಊರಿಗೆ ಹೋದಾಗ ಪಾಲಕರು, ನೆರೆಹೊರೆಯವರಿಗೆ ಮತದಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ೫೮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರಾದ ಮುರಳೀಧರ, ಈಶ್ವರರೆಡ್ಡಿ, ಗಂಗಾಧರ, ನಾಗರಾಜ ಹಾಜರಿದ್ದರು.
- Advertisement -
- Advertisement -
- Advertisement -







