‘ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನುಕಳುಹಿಸುತ್ತಿರುವ ಎಲ್ಲಾ ತಂದೆ ತಾಯಿಗಳಿಗೆ ಈ ಶಾಮಂತಿ’ ಎಂದು ಶಾಮಂತಿ ಪುಸ್ತಕವನ್ನು ಮುದ್ದಾದ ಮಗುವಿನ ಬರಹದ ಮೂಲಕವೇ ಅರ್ಪಣೆ ಮಾಡಲಾಗಿದೆ. ಈ ಪುಸ್ತಕವು ಬಿಡುಗಡೆಯಾಗಿರುವುದು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ.
ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬರಹಗಳು ಮತ್ತು ಚಿತ್ರಗಳನ್ನೊಳಗೊಂಡ ಸುಂದರ ‘ಶಾಮಂತಿ – ಮಕ್ಕಳ ತೋಟದ ಹೂವ್ವು’ ಪುಸ್ತಕ ಸತತವಾಗಿ ಐದನೇ ವರ್ಷ ಪ್ರಕಟವಾಗುತ್ತಿದೆ. ಶಿಕ್ಷಕ ಎಸ್.ಕಲಾಧರ ಸಂಪಾದಿಸಿರುವ ಶಾಮಂತಿಯನ್ನು ಕನ್ನಮಂಗಲ ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘ ತಮ್ಮ ಸ್ನೇಹ ಪ್ರಕಾಶನದಿಂದ ಹೊರತಂದಿದ್ದಾರೆ.
ಇರಾನಿ ನಿರ್ದೇಶಕ ಮಾಜಿದ್ ಮಜಿದಿ ನಿರ್ದೇಶಿಸಿದ ‘ಚಿಲ್ಡ್ರನ್ ಆಫ್ ಹೆವನ್’ ಚಲನಚಿತ್ರವನ್ನು ಶಾಲೆಯಲ್ಲಿ ತೋರಿಸಿದಾಗ ಏಳನೆಯ ತರಗತಿಯ ಗಾಯತ್ರಿ ಈ ‘ಸ್ವರ್ಗದ ಮಕ್ಕಳ’ ಭಾಷೆ ಅರ್ಥವಾಗದಿದ್ದರೂ ಭಾವನೆಯನ್ನು ಅರ್ಥೈಸಿಕೊಂಡು ಬರೆದಿದ್ದಾಳೆ. ಗಾಯತ್ರಿಗೆ ಚಿತ್ರದಲ್ಲಿನ ಅಲಿ ಮತ್ತು ಝಾರಾ ತಮ್ಮ ಸಹಪಾಠಿಗಳಂತೆನಿಸಿದ್ದಾರೆ.
ಆರನೆ ತರಗತಿಯ ದೀಪಿಕ ತನ್ನ ಪುಟಾಣಿ ತಂಗಿಯನ್ನು ಶಾಲೆಗೆ ಕರೆತಂದು ಪಟ್ಟ ಅವಾಂತರವನ್ನು ಬರೆದಿದ್ದಾಳೆ. ಕೋಕಿಲ ಅನ್ನೋ ಹುಡುಗಿ ಹುಣಸೇ ಕಾಯಿಯ ಲಾಲಿಪಾಪ್ ಮಾಡಿ ತಿನ್ನುವುದನ್ನು ಹೇಳುತ್ತಾಳೆ. ಆರನೆಯ ತರಗತಿಯ ನಿರಂಜನ್ ಕೋಳಿ ಮರಿಯನ್ನು ಹಾರಿಸಿಕೊಂಡು ಹೋಗಲು ಬಂದ ಹದ್ದನ್ನು ಓಡಿಸಿ ಕೋಳಿ ಮರಿಗೆ ಆಯಿಂಟ್ಮೆಂಟ್ ಹಚ್ಚಿದ ಬಗ್ಗೆ ತಿಳಿಸಿದ್ದಾನೆ. ರಾಜೇಶ್ ತಮ್ಮೂರಿನ ಪಾಚಿನೀರಿನ ಕುಂಟೆಯ ಬಗ್ಗೆ ಕವಿತೆ ರಚಿಸಿದ್ದಾನೆ. ಶಿಕ್ಷಕರು ಆದಿಮಕ್ಕೆ ಕರೆದೊಯ್ದಿದ್ದರ ಬಗ್ಗೆ ನವೀನ್ ಕುಮಾರ್ ಗುನಗುನಿಸುವ ಹಾಗಿರುವ ಪದ್ಯ ರಚಿಸಿದ್ದಾನೆ.
ಇದರಲ್ಲಿ ತಾವು ಕಂಡ ಮಳೆ, ಮೋಡ, ಏಡಿ, ಬೆಕ್ಕು, ಬೆಟ್ಟ, ಎತ್ತು, ಕೋಳಿ, ನಾಯಿ, ಅಮ್ಮ, ಒಲೆ, ಹಂದಿಯ ಬಗ್ಗೆ ಮಕ್ಕಳು ಕವನ ರಚಿಸಿದ್ದಾರೆ. ಅಜ್ಜಿ ಹೇಳಿದ ಕತೆಯನ್ನು ತಮ್ಮದೇ ಮುದ್ದಾದ ಭಾಷೆಯಲ್ಲಿ ಬರೆದಿದ್ದಾರೆ. ಸಾಂಬಾರ್ ಕಾಗೆ, ಹದ್ದು, ಪಾರಿವಾಳಗಳ ಬಗ್ಗೆಯೂ ತಿಳಿಸಿದ್ದಾರೆ. ಬುಗುರಿ, ಚಿಣ್ಣಿ ದಾಂಡು, ಚಾಕಲೇಟ್ ಪೇಪರ್ ಹಾರ ಮಾಡುವ ಬಗ್ಗೆ ಹೇಳಿದ್ದಾರೆ. ತಾವು ಕಂಡಿರುವ ಜೀವತಾಣಗಳನ್ನು ಪರಿಚಯಿಸಿದ್ದಾರೆ. ಉಪ್ಪು ಮಾರುವವರು, ಜಾತ್ರೆ, ಕಟಿಂಗ್ ನಾರಾಯಣಪ್ಪ ಮುಂತಾದ ಜನಪದವನ್ನೂ ಬರಹಕ್ಕಿಳಿಸಿದ್ದಾರೆ. ಒಂಬತ್ತನೇ ತರಗತಿಯ ಕೆ.ಎನ್.ಭವಾನಿ ಒಂದು ಬಿಂದೆಗೆ ನೀರಿಗಾಗಿ ಜಗಳವಾಡುವ ಗ್ರಾಮದ ಮಹಿಳೆಯರ ನೀರಿನ ಬವಣೆಯ ಬಗ್ಗೆ ‘ನೀರಿನ ಕದನ’ ಎಂಬ ನಾಟಕವನ್ನೇ ರಚಿಸಿದ್ದಾಳೆ. ಸುಟಿಕೆ ಇಡುವ ನಂಬಿಕೆಯ ಬಗ್ಗೆ ಆಶಾ ಬರೆದಿದ್ದಾಳೆ. ಕನಸಿನ ಬಗ್ಗೆ, ಮರಗಳನ್ನು ನೆಡುವ ಬಗ್ಗೆ, ಹಾವನ್ನು ಕಾಪಾಡುವ ಸ್ನೇಕ್ ನಾಗರಾಜ್ ಬಗ್ಗೆ, ಏಡಿ ಹಿಡಿಯುವ ಬಗ್ಗೆ, ರೇಷ್ಮೆ ಸಾಕಾಣಿಕೆ, ಸೌತೆಬೆಳೆಯ ಬಗ್ಗೆಯೂ ಮಕ್ಕಳು ಬರೆದಿದ್ದಾರೆ.
ತಮ್ಮ ಶಾಲೆಯ ಗ್ರಂಥಾಲಯದಿಂದ ಓದಿರುವ ಪುಸ್ತಕಗಳಾದ ನನ್ನ ಗೋಪಾಲ, ತೊತ್ತೋಚಾನ್, ನೆಗೆತ, ಚಿನ್ನಾರಿಮುತ್ತ, ನಿಸರ್ಗ ಮತ್ತು ಗುಬ್ಬಚ್ಚಿ ಕುರಿತಂತೆ ಮಕ್ಕಳು ಬರೆದಿದ್ದಾರೆ. ಇರಾನಿಯನ್ ಚಲನಚಿತ್ರಗಳಾದ ಕಲರ್ ಆಫ್ ಪ್ಯಾರಡೈಸ್, ಚಿಲ್ಡ್ರನ್ ಆಫ್ ಹೆವನ್, ಕನ್ನಡದ ಕಾಡಹಾದಿಯ ಹೂಗಳು, ಇಂಗ್ಲಿಷ್ನ ಆಲಿವರ್ ಟ್ವಿಸ್ಟ್ ಬಗ್ಗೆಯೂ ಮಕ್ಕಳು ಬರೆದಿರುವುದು ಅಚ್ಚರಿ ಮೂಡಿಸುತ್ತದೆ.
ಜಿಲ್ಲೆಯ ಆಡುಮಾತಿನಲ್ಲಿರುವ ತೆಲುಗನ್ನಡ ಪದಗಳಾದ ‘ತರಿಮಿಕೊಂಡು’, ‘ಹುಲ್ಲಾಮೆ’, ‘ಎಗರ್ಲಾಡೋದು’, ‘ರವಷ್ಟು’, ‘ಕುಲ್ಲು’, ‘ಯಮಕೆ’, ‘ಕಿತ್ಲಾಡು’ ಮುಂತಾದವು ಮಕ್ಕಳ ಬರಹದಲ್ಲಿದ್ದು, ಗ್ರಾಮೀಣ ಸೊಗಡನ್ನು ಓದುಗರಿಗೆ ರವಾನಿಸುತ್ತವೆ.
‘ನಮ್ಮ ಗ್ರಾಮ ಹಿಂದೆ ಬಹಳ ಹಿಂದುಳಿದಿತ್ತು. ಈಗ ಆಧುನಿಕತೆಯ ಹೊಸಗಾಳಿ ಬೀಸುತ್ತಿದೆ. ಈ ಬದಲಾವಣೆಯ ಹಿಂದೆ ನಮ್ಮೂರ ಸರ್ಕಾರಿ ಶಾಲೆಯಿದೆ. ನಮ್ಮ ಶಾಲೆಯ ಶಿಕ್ಷಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಸ್ನೇಹ ಯುವಕರ ಸಂಘವನ್ನು ಹುಟ್ಟು ಹಾಕುವ ಮೂಲಕ ನಮ್ಮೂರ ಶಾಲೆಯ ಶಿಕ್ಷಕರು ಗ್ರಾಮದ ಯುವಕರ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಅದರಂತೆ ಹನ್ನೆರಡು ವರ್ಷಗಳಿಂದಲೂ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ನಮ್ಮೂರ ಮಕ್ಕಳ ಬರವಣಿಗೆಗಳನ್ನು ಪ್ರಕಟಿಸುವ ಕೆಲಸಕ್ಕೂ ಕೈಹಾಕಿದ್ದೇವೆ. ಈ ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಬೆಳೆಯಬಹುದಾದ ಸಾಹಿತ್ಯಪ್ರೇಮ, ಚಿಂತನಶೀಲತೆ ಹಾಗೂ ಸೃಜನಶೀಲತೆಗಳು ಮುಂದೆ ನಮ್ಮ ಗ್ರಾಮವನ್ನು ಇನ್ನಷ್ಟು ಸುಂದರವಾಗಿ ರೂಪಿಸಲಿ ಎಂಬುದೇ ನಮ್ಮ ಆಶಯ’ ಎನ್ನುತ್ತಾರೆ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತಕುಮಾರ್.
‘ಈ ಮಕ್ಕಳಿಗೆ ದೊಡ್ಡವರ ಹಾಗೆ ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಅಂತೆಲ್ಲ ಗೊತ್ತಿಲ್ಲ, ಅದೆಲ್ಲ ಲೆಕ್ಕ ಅವಕ್ಕೆ ಗೊತ್ತಿಲ್ಲ. ಏನೇನೆಲ್ಲ ಹೇಳಿಬಿಡಬೇಕು ಅಂತ ಅನಿಸಿದೆಯೋ ಅದನ್ನೆಲ್ಲ ಹೇಳಿಬಿಟ್ಟಿವೆ. ಹಾಗಾಗಿ ಈ ಮಕ್ಕಳ ಬರಹಗಳು ಈಗ ತಾನೆ ಗಿಡದಲ್ಲಿ ಅರಳಿದ ಸೇವಂತಿಯ ಹಾಗಿವೆ. ಅದೇ ಶುಭ್ರತೆ, ಸ್ವಚ್ಛ ಹೃದಯವುಳ್ಳ ಇವರು ‘ದೇವರು ಮಕ್ಕಳಲ್ಲಿರುತ್ತಾರೆ’ ಎಂಬ ಮಾತಿಗೆ ಪ್ರತಿರೂಪದಂತಿದ್ದಾರೆ. ಮಕ್ಕಳ ಬರಹಗಳನ್ನು ಓದುತ್ತಿದ್ದರೆ, ಅವರೊಂದಿಗೆ ಬುತ್ತಿ ಹಂಚಿಕೊಂಡು ಅವರ ಮಾತುಕತೆ ಕಿಲಿಕಿಲಿ ಎಲ್ಲ ಆಲಿಸಿದಂತಿದೆ. ಹಿರಿಯರು ಕಳೆದುಹೋದ ತಮ್ಮ ಬಾಲ್ಯವನ್ನು ಮಕ್ಕಳ ಬರಹದಿಂದ ಮೊಗೆದುಕೊಳ್ಳಬಹುದು. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಓದಲು ಒಳ್ಳೊಳ್ಳೆ ಪುಸ್ತಕಗಳನ್ನು ಕೊಡುತ್ತಾರೆ. ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಚಲನಚಿತ್ರ ತೋರಿಸುತ್ತಾರೆ. ನಾಟಕ ತೋರಿಸ್ತಾರೆ, ಆಡಿಸ್ತಾರೆ. ಬರೆಸುತ್ತಾರೆ, ಬರೆದದ್ದನ್ನು ಪ್ರಕಟಿಸುತ್ತಾರೆ. ಈ ಶಾಮಂತಿ ಹೂವುಗಳ ಮಾಲೆ ಪೋಣಿಸಿ ಚೆಂದವಾಗಿ, ಬಣ್ಣಬಣ್ಣವಾಗಿ ಕಟ್ಟುತ್ತಿರುವ ಎಲ್ಲ ಕೈಗಳಿಗೆ ಸಲಾಮುಗಳು’ ಎಂದು ಲೇಖಕ ಆನಂದ ಪಾಟೀಲ ಮುನ್ನುಡಿಯಲ್ಲಿ ಬರೆದಿದ್ದಾರೆ.
ಶಾಮಂತಿಯ ಮಕ್ಕಳ ಬರಹಗಳನ್ನು ಮೆಚ್ಚಿ ನಾಡಿನ ಹೆಸರಾಂತ ಲೇಖಕರಾದ ನಾಡಿಸೋಜ, ಸುನಂದಾ ಪ್ರಕಾಶ ಕಡಮೆ, ಬೇಲೂರು ರಘುನಂದನ್, ಸಂದೀಪ ನಾಯಕ, ಅಕ್ಷತಾ ಹುಂಚದಕಟ್ಟೆ, ಬಿ.ಶ್ರೀಪಾದ ಭಟ್, ರಂಗಮ್ಮ ಹೊದೇಕಲ್, ಮಂಜುನಾಥ ಅದ್ದೆ, ಮಮತಾ ಸಾಗರ್, ಮಲ್ಲಿಕಾರ್ಜುನ ಹೊಸಪಾಳ್ಯ ತಮ್ಮ ಅನಿಸಿಕೆಗಳನ್ನು ಬರೆದುಕೊಟ್ಟು ಅಭಿನಂದಿಸಿದ್ದಾರೆ.
ಪುಸ್ತಕ ಬೇಕಿದ್ದಲ್ಲಿ ಸಂಪರ್ಕಿಸಿ, ಎಸ್.ಕಲಾಧರ (9900695142)
- Advertisement -
- Advertisement -
- Advertisement -
- Advertisement -