ತಾಲ್ಲೂಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ಮತ್ತು ಕೇಂದ್ರ ಜನವಿರೋಧಿ ನೀತಿಗಳನ್ನು ಖಂಡಿಸಿ ತಾಲ್ಲೂಕು ಕಚೇರಿಯ ಮುಂದೆ ಗುರುವಾರ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ತಾಲ್ಲೂಕು ಸಮಿತಿ ಸದಸ್ಯರು ಪ್ರತಿಭಟಿಸಿದರು.
ತಾಲ್ಲೂಕು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿದೆ. ಮಳೆಯ ಅಭಾವದಿಂದ ಬಿತ್ತನೆ ಕಾರ್ಯ ಅಸಮರ್ಪಕವಾಗಿ ನಡೆದಿದ್ದು, ರೈತರ ಬೆಳೆಗಳು ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ. ಕೃಷಿಯನ್ನು ನಂಬಿ ಬದುಕುವ ಕುಟುಂಬಗಳು ನಗರ ಪ್ರದೇಶಕ್ಕೆ ಗುಳೆ ಹೊರಟಿವೆ.
ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ನರೇಗಾದಲ್ಲಿ ನಡೆದಿರುವ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಯಬೇಕು. ಶೌಚಾಲಯ ನಿರ್ಮಿಸಿದ ಕುಟುಂಬಗಳಿಗೆ ತಕ್ಷಣ ಬಿಲ್ ಪಾವತಿಸಬೇಕು. ಬಾಕಿ ಇರುವ ಶೌಚಾಲಯಗಳ ನಿರ್ಮಾಣಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು. ತಾಲ್ಲೂಕಿನಲ್ಲಿ ಕುಡಿಯುವ ನೀರು ಅಭಾವವಿರುವ ಎಲ್ಲಾ ಹಳ್ಳಿಗಳಿಗೂ ಸಮರ್ಪಕವಾಗಿ ನೀರು ಒದಗಿಸಬೇಕು. ತಾಲ್ಲೂಕಿನಾದ್ಯಂತ ಹರಡಿರುವ ಮಾರಕ ಖಾಯಿಲೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ನೀಡಬೇಕು. ತಾಲ್ಲೂಕಿನ ಜನಸಾಮಾನ್ಯರ ಕೆಲಸಗಳು ತಾಲ್ಲೂಕು ಕಚೇರಿಯಲ್ಲಿ ವಿಳಂಬವಾಗದೇ ಸಕಾಲಕ್ಕೆ ನಡೆಯಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ನೀಡಿದರು.
ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಕೆ.ಎಂ.ವೆಂಕಟೇಶ್, ಮಳ್ಳೂರು ಶಿವಣ್ಣ, ಕೆ.ಸಿ.ವೆಂಕಟೇಶ್, ಜಿ.ಎನ್.ಲಕ್ಷ್ಮೀದೇವಮ್ಮ, ಮುನೀಂದ್ರ, ಅಶ್ವತ್ಥಮ್ಮ, ನಟರಾಜ್, ಖಲೀಲ್, ಸದಾನಂದ, ಸತ್ತರ್, ನರಸಿಂಹಪ್ಪ, ಪಾಪಣ್ಣ, ವೆಂಕರೋಣಪ್ಪ, ಅಶ್ವತ್ಥಮ್ಮ, ಮಂಜುಳ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -
- Advertisement -