ಮರೆಯಾದ ಮಡಿವಾಳರ ವಾಷಿಂಗ್‌ಮಿಷನ್‌ ಉಬ್ಬೆ

- Advertisement -
- Advertisement -

ಹಿಂದೆ ಗ್ರಾಮಗಳಲ್ಲಿ ಎಲ್ಲಾ ಸಮಾಜದವರ ಬಟ್ಟೆಗಳನ್ನು ಶುದ್ಧ ಮಾಡಿಕೊಡುವ ಕೆಲಸವನ್ನು ಮಡಿವಾಳ ಜನಾಂಗದವರು ಮಾಡುತ್ತಿದ್ದರು. ಅದಕ್ಕಾಗಿ ಅವರ ಮನೆಗಳಲ್ಲಿ ಉಬ್ಬೆ ಇರುತ್ತಿತ್ತು. ಕಾಲದ ಬದಲಾವಣೆ, ಮನೆಮನೆಗಳಲ್ಲಿ ಪ್ರವೇಶಿಸಿದ ವಾಷಿಂಗ್‌ಮಿಷನ್‌ ಉಬ್ಬೆಗಳನ್ನು ಮರೆಯುವಂತೆ ಮಾಡಿತು.
ಈಗ ಉಬ್ಬೆಗಳು ಹೇಗಿತ್ತು ಎಂದು ಊಹಿಸಿಕೊಳ್ಳಲೂ ಸಹ ಎಲ್ಲಿಯೂ ಉಳಿದಿಲ್ಲ. ಆದರೆ, ತಾಲ್ಲೂಕಿನ ಕಾಚಹಳ್ಳಿಯ ಎಂ.ದೇವರಾಜ್ ಅವರ ಕುಟುಂಬದವರು ಬಳಸುತ್ತಿದ್ದ ಉಬ್ಬೆಯು ಅವರ ಮನೆಯಲ್ಲಿ ಇನ್ನೂ ಪಳೆಯುಳಿಕೆಯಂತೆ ಉಳಿದಿದೆ. ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಎಂ.ದೇವರಾಜ್, ತಮ್ಮ ತಂದೆ ಕಾಚಹಳ್ಳಿ ಮುನಿಯಪ್ಪ ಹೇಗೆ ಮಡಿವಾಳ ವೃತ್ತಿಯನ್ನು ಮಾಡುತ್ತಿದ್ದರು ಎಂದು ಅವರ ಶ್ರಮ ಜೀವನದ ಬಗ್ಗೆ ವಿವರಿಸುತ್ತಾರೆ.
‘ತಾಲ್ಲೂಕಿನ ನಾಗಮಂಗಲ, ಭಕ್ತರಹಳ್ಳಿ, ಮಳಮಾಚನಹಳ್ಳಿ, ಕಾಕಚೊಕ್ಕಂಡಹಳ್ಳಿ, ಮುತ್ತೂರು, ಚೌಡಸಂದ್ರ ಹೀಗೆ ಹತ್ತಾರು ಹಳ್ಳಿಗಳಿಂದ ಮಡಿವಾಳರು ಎರಡು ಅಥವಾ ನಾಲ್ಕು ಕತ್ತೆಗಳೊಂದಿಗೆ ಕಾಚಹಳ್ಳಿಗೆ ಬಂದು ಬೆಳಗಿನ ಜಾವ ಮೂರು ಗಂಟೆಯ ಹೊತ್ತಿಗೇ ಆಂಧ್ರದ ಅಂಚಿಗೆ ಬರುವ ಕೆರೆಗಳ ಸಮೀಪಕ್ಕೆ ತೆರಳುತ್ತಿದ್ದರು. ಕೆರೆಗಳ ದಂಡೆಗಳಲ್ಲಿ ಸಿಗುತ್ತಿದ್ದ ಸವಳನ್ನು(ಲವಣಾಂಶ ಬೆರೆತ ಮಣ್ಣು) ಕತ್ತೆಗಳ ಮೇಲೆ ಹೊತ್ತು ತರುತ್ತಿದ್ದರು. ಇವರು ಕಾಲ್ನಡಿಗೆಯಲ್ಲಿ ಹೋಗಿ ಬರಲು ಒಂದು ವಾರ ಬೇಕಾಗುತ್ತಿತ್ತು. ಒಂದು ಸಾರಿ ಹೊರಟರೆ ಒಂದು ವರ್ಷಕ್ಕಾಗುವಷ್ಟು ಸವಳನ್ನು ಸಂಗ್ರಹಿಸುತ್ತಿದ್ದರು.
ಪ್ರತಿ ಹಳ್ಳಿಯಲ್ಲೂ ಮಡಿವಾಳರು ಸುಮಾರು 20 ರಿಂದ 40 ಮನೆಗಳವರ ಕೊಳೆ ಬಟ್ಟೆಗಳನ್ನು ತಂದು ವಿಂಗಡಿಸಿ ಸವಳನ್ನು ನೀರಿಗೆ ಮಿಶ್ರಣ ಮಾಡಿ ಕೊಳೆ ಬಟ್ಟೆಗಳನ್ನು ಅದರಲ್ಲಿ ನೆನೆಸಿ ಉಬ್ಬೆಯ ಮೇಲೆ ಗೋಳಾಕಾರದಲ್ಲಿ ಸುತ್ತುತ್ತಿದ್ದರು. ನಂತರ ಅದೇ ದಿನ ಉಬ್ಬೆಗೆ ಬೆಂಕಿಯನ್ನು ಹಾಕಿ ನೀರನ್ನು ಕಾಯಿಸುತ್ತಿದ್ದರು. ಆ ಹಬೆಗೆ ಬಟ್ಟೆಗಳಲ್ಲಿರುವ ಕೊಳೆ ಬಿಟ್ಟುಕೊಳ್ಳುತ್ತಿತ್ತು.
ಮಾರನೆ ದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಉಬ್ಬೆಗೆ ಸುತ್ತಿದ್ದ ಬಟ್ಟೆಗಳನ್ನು ಮಾದೆಗಳಲ್ಲಿ ಗಂಟು ಕಟ್ಟಿಕೊಂಡು ಕತ್ತೆಗಳ ಮೇಲೆ ಹೇರಿಕೊಂಡು ಮೇಲೂರು ಮಳ್ಳೂರು ಸಮೀಪದ ಗಂಗಮ್ಮನ ಕುಂಟೆಗೆ ತರುತ್ತಿದ್ದರು. ಅಲ್ಲಿ ನೀರಿನ ಹತ್ತಿರ ಸಿದ್ಧಗೊಳಿಸಿರುವ ಬಂಡೆಗಳ ಮೇಲೆ ಬಟ್ಟೆಗಳನ್ನು ಜಾಡಿಸಿ ಹೊಡೆದು ಅದರಲ್ಲಿರುವ ಕೊಳೆಯನ್ನು ಹೋಗಲಾಡಿಸಿ ಅದೇ ನೀರಿನಲ್ಲಿ ಜಾಲಿಸುತ್ತಿದ್ದರು. ಕುಂಟೆಯ ದಡದ ಮೇಲೆ ಬಟ್ಟೆಯನ್ನು ಹಾಸಿ ಬಿಸಿಲಿಗೆ ಒಣಗಿಸಲಾಗುತ್ತಿತ್ತು. ಸಂಜೆ ಮನೆಗೆ ತಂದು ಅವನ್ನು ಮನೆಗಳಿಗೆ ಸಂಬಂಧಿಸಿದಂತೆ ವಿಂಗಡಿಸಿ ಇಸ್ತ್ರಿ ಮಾಡಿ ಕೊಡುವ ಕಾಯಕ ನಡೆಯುತ್ತಿತ್ತು.
ಬಟ್ಟೆಗಳನ್ನು ವಿಂಗಡಿಸಲು ಗೇರುಬೀಜಕ್ಕೆ ಸೂಜಿಯನ್ನು ಚುಚ್ಚಿ ಅದರಿಂದ ಬಂದ ಕಪ್ಪು ಬಣ್ಣದಿಂದ ಪ್ರತಿ ಕುಟುಂಬದ ಬಟ್ಟೆಗಳಿಗೆ ಗುರುತನ್ನು ಮಾಡುತ್ತಿದ್ದರು.
ಇಷ್ಟೆಲ್ಲಾ ಶ್ರಮದ ದುಡಿಮೆಗೆ ತಿಂಗಳಿಗೊಂದಿಷ್ಟು ಹಣ ಅಥವಾ ದವಸ ಧಾನ್ಯಗಳನ್ನು ಪಡೆಯುತ್ತಿದ್ದರು. ಸಾಮಾಜಿಕ ಬದಲಾವಣೆಗಳಾದಂತೆ ಮಡಿವಾಳರ ಅಗತ್ಯವೂ ಕಡಿಮೆಯಾಗತೊಡಗಿತು. ನಮ್ಮ ಜೀವನವೂ ಕಷ್ಟಕರವಾಗತೊಡಗಿತು. ಹಾಗಾಗಿ ವಿವಿಧ ವೃತ್ತಿಗಳನ್ನು ಕೈಗೊಳ್ಳಬೇಕಾಯಿತು. ಉಬ್ಬೆಯು ಇತಿಹಾಸಕ್ಕೆ ಸೇರಿತು. ಈಗ ಕೆರೆಗಳಲ್ಲಿ ನೀರಿಲ್ಲ, ಇನ್ನು ಸವುಳು ಮಣ್ಣನ್ನು ಕಾಣುವುದೆಂತು. ಕಾಲದ ಹರಿವಿನಲ್ಲಿ ಉಬ್ಬೆಯು ಗತಕಾಲದ ಜನಜೀವನದ ನೆನಪಾಗಿ ಉಳಿದಿರುವ ಒಂದು ಸಂಗತಿಯಾಗಿದೆ’ ಎನ್ನುತ್ತಾರೆ ಕಾಚಹಳ್ಳಿ ದೇವರಾಜ್‌.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!