ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಮಲ್ಲಿಶೆಟ್ಟಿಪುರದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.
ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ವಿಶ್ವನಾಥ್, ಗ್ರಾಮ ಲೆಕ್ಕಿಗ ನಾಗರಾಜ್ ಹಾಗೂ ಸಿಬ್ಬಂದಿ ಜೆಸಿಬಿ ಮೂಲಕ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿದರು.
ಮಲ್ಲಿಶೆಟ್ಟಿಪುರ ಕೆರೆಯು ಸುಮಾರು ೩೦೦ ಎಕರೆಯಷ್ಟು ವಿಶಾಲವಾಗಿದ್ದು ಈ ಪೈಕಿ ಕೆರೆಯ ಅಚ್ಚುಕಟ್ಟಿದ ಮಲ್ಲಿಶೆಟ್ಟಿಪುರ, ತುಮ್ಮನಹಳ್ಳಿ, ಹುಜಗೂರು ಇನ್ನಿತರೆ ಗ್ರಾಮಸ್ಥರು ಸುಮಾರು ೯೦ಕ್ಕೂ ಹೆಚ್ಚು ಎಕರೆಯಷ್ಟು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದರು. ಹಿಪ್ಪುನೇರಳೆ, ಚೇಪೆ ಹಣ್ಣು, ದ್ರಾಕ್ಷಿ, ಸೀಮೆ ಹುಲ್ಲು, ಬಜ್ಜಿ ಮೆಣಸಿನಕಾಯಿ ಸೇರಿದಂತೆ ವಿವಿದ ಬೆಳೆಗಳನ್ನು ಒತ್ತುವರಿ ಮಾಡಿಕೊಂಡ ಜಮೀನಿನಲ್ಲಿ ಬೆಳೆಯುತ್ತಿದ್ದರು.
ಕೆರೆ ಪ್ರದೇಶವನ್ನು ಸುತ್ತಾಡಿ ಪರಿಶೀಲಿಸಿದ ತಹಸೀಲ್ದಾರರು, ಈ ಮೊದಲೆ ಗುರ್ತಿಸಿದಂತೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದರು.
ಈಗಾಗಲೆ ಇಟ್ಟ ಬೆಳೆಗಳ ಫಸಲನ್ನು ಕಟಾವು ಮಾಡಿಕೊಳ್ಳಲು ಒಂದೆರಡು ದಿನಗಳ ಕಾಲಾವಕಾಶವನ್ನು ಒತ್ತುವರಿದಾರರಿಗೆ ನೀಡಿ, ಇಲ್ಲವಾದಲ್ಲಿ ಫಸಲಿನೊಂದಿಗೆ ಒತ್ತುವರಿಯನ್ನು ತೆರವುಗೊಳಿಸಲಾಗುವುದಲ್ಲದೆ ಕ್ರಿಮಿನಲ್ ಕೇಸನ್ನು ದಾಖಲಿಸುವ ಎಚ್ಚರಿಕೆ ನೀಡಿದರು. ಆದರೆ ಯಾವೊಬ್ಬ ರೈತರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸದೆ ಎಲ್ಲ ರೈತರು ಒತ್ತುವರಿ ಮಾಡಿಕೊಂಡ ಜಮೀನನ್ನು ಬಿಟ್ಟುಕೊಡಲು ಸಮ್ಮತಿಸಿದರು.
ಎಲ್ಲ ಒತ್ತುವರಿದಾರರ ಹೆಸರು, ವಿಳಾಸವನ್ನು ಪಟ್ಟಿ ಮಾಡಿಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿ ಒತ್ತುವರಿ ತೆರವಿನ ನಂತರ ಈ ಬಗ್ಗೆ ನಿಗಾ ಇಡಲಿದ್ದು ಮತ್ತೊಮ್ಮೆ ಒತ್ತುವರಿ ಮಾಡಿಕೊಂಡರೆ ಅವರ ವಿರುದ್ದ ಅತಿಕ್ರಮ ಪ್ರವೇಶ, ಸರಕಾರಿ ಸ್ವತ್ತು ನಾಶದಂತ ಕ್ರಿಮಿನಲ್ ಕೇಸು ದಾಖಲಿಸುವಂತೆ ತಿಳಿಸಿದರು.
- Advertisement -
- Advertisement -
- Advertisement -
- Advertisement -