25.1 C
Sidlaghatta
Sunday, August 14, 2022

ಮಳೆಗಾಗಿ ಮೇಲೂರು ಗ್ರಾಮದಲ್ಲಿ ಕತ್ತೆಗಳ ಮದುವೆ

- Advertisement -
- Advertisement -

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶುಕ್ರವಾರ ಎಲ್ಲಿಲ್ಲದ ಸಂಭ್ರಮ. ಗ್ರಾಮದ ಗಂಗಮ್ಮನ ದೇವಸ್ಥಾನದ ಬಳಿ ಚಪ್ಪರವನ್ನು ಹಾಕಲಾಗಿತ್ತು. ಮಂಗಳ ವಾದ್ಯ ಮೊಳಗುತ್ತಿತ್ತು. ಇಡೀ ಗ್ರಾಮದಲ್ಲಿ ಹಬ್ಬದ ಸಡಗರ ಹಾಗೂ ಮದುವೆ ಸಂಭ್ರಮ. ಅದನ್ನು ನೋಡಲು ಹೋದವರಿಗೆ ಅಚ್ಚರಿಯೋ ಅಚ್ಚರಿ.
ಏಕೆಂದರೆ ಮದುವೆಯಾಗುತ್ತಿದ್ದವರು ಬಡಾವಣೆಯ ನಿವಾಸಿಗಳಲ್ಲ. ಅಲ್ಲಿ ಬಾಸಿಂಗ ಕಟ್ಟಿಕೊಂಡು, ಹಾರ ಹಾಕಿಕೊಂಡು ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದು ದೇವನಹಳ್ಳಿ ತಾಲ್ಲೂಕು ಚೀಮಾಚನಹಳ್ಳಿಯಿಂದ ಬಂದಿದ್ದ ಎರಡು ಪ್ರಾಯದ ಕತ್ತೆಗಳು. ವಿಳಂಬವಾಗಿರುವ ಮಳೆಗಾಗಿ ಜಿಲ್ಲೆಯ ಜನತೆ ಸಲ್ಲಿಸುತ್ತಿರುವ ಬಗೆಬಗೆಯ ಪ್ರಾರ್ಥನೆಗೆ ಇದೀಗ ಮೇಲೂರಿನ ಕತ್ತೆ ಮದುವೆಯೂ ಸೇರ್ಪಡೆಗೊಂಡಿದೆ.
ಗಂಡು, ಹೆಣ್ಣು ಜೋಡಿ ಕತ್ತೆಗಳಿಗೆ ಗ್ರಾಮಸ್ಥರು ಅರಿಶಿನ ಹಚ್ಚಿ, ಸುರಿಗೆ ನೀರು ಹಾಕಿ, ಬಾಸಿಂಗ ತೊಡಿಸಿದ್ದು ಮಾತ್ರವಲ್ಲ, ಮಾಂಗಲ್ಯ ಧಾರಣೆಯನ್ನೂ ಮಾಡಿಸಿ ಅಕ್ಷತೆ ಹಾಕಿದರು. ಈ ಭಾಗದ ಮದುವೆಯಲ್ಲಿ ಆಚರಿಸಲಾಗುವ ಎಲ್ಲಾ ಬಗೆ ಸಂಪ್ರದಾಯಗಳನ್ನೂ ಕತ್ತೆ ಮದುವೆಯಲ್ಲಿ ಮಾಡಿದ್ದು ವಿಶೇಷ.
ಜಿಲ್ಲೆಯಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ರೈತರು ವರುಣನ ಮೊರೆ ಹೋಗಲು ಕತ್ತೆಗಳಿಗೆ ಮದುವೆ ಮಾಡುವುದರ ಮೂಲಕ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಂಡರು.
ಶುಕ್ರವಾರ ಬೆಳಿಗ್ಗಿನಿಂದಲೇ ಗ್ರಾಮದ ಗಂಗಾದೇವಿ ದೇವಾಲಯದ ಆವರಣದಲ್ಲಿ ಹಸಿರು ಚಪ್ಪರಗಳಿಂದ ಸಿಂಗರಿಸಿ ಗೊಡ್ಡುಕಲ್ಲುಗಳನ್ನು ಪೂಜಿಸಿದ ನಂತರ ವಾದ್ಯವೃಂದದೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭವನ್ನು ಗ್ರಾಮಸ್ಥರು ಸಡಗರ, ಸಂಭ್ರಮದಿಂದ ಪ್ರಾರಂಭಿಸಿದರು.
ವರನನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಕಂಕಣ ಕಟ್ಟಿ ಪಾದ ಪೂಜೆ ಮಾಡುವುದರ ಮೂಲಕ ಮೆರವಣಿಗೆಯಲ್ಲಿ ದೇವಾಲಯದ ಆವರಣಕ್ಕೆ ಕರೆತರಲಾಯಿತ್ತಲ್ಲದೇ ಮದುವೆ ಸಂಪ್ರದಾಯದಂತೆ ವಧುವಿಗೆ ಮಾಂಗಲ್ಯಧಾರಣೆಯನ್ನು ಮಾಡಲಾಯಿತು.
ವಿವಾಹ ಕಾರ್ಯಕ್ರಮದಲ್ಲಿ ನೆರೆದಿಂದ ನೂರಾರು ಗ್ರಾಮಸ್ಥರು ವಧು, ವರರಿಗೆ ಹಾಲಿನ ಸೇವೆ, ಅಕ್ಷತೆಯನ್ನು ಹಾಕುವ ಮೂಲಕ ನೂತನ ದಂಪತಿಗಳನ್ನು ಆಶೀರ್ವದಿಸಿದರು. ಗ್ರಾಮಸ್ಥರು ಮದುವೆಗಳಲ್ಲಿ ನೀಡುವ ರೀತಿಯಲ್ಲಿ ಉಡುಗೊರೆಗಳನ್ನು ಸಹ ನೀಡಿದ್ದು ವಿಶೇಷವಾಗಿತ್ತು.
ಗಂಡು ಕಡೆಯವರಾಗಿ ಹಿರಿಯರಾದ ಜೆ.ಜೆ.ಗೌಡ ಮತ್ತು ನಂಜಮ್ಮ ಶಾಸ್ತ್ರದಲ್ಲಿ ಭಾಗಿಯಾದರೆ, ಹೆಣ್ಣಿನ ಕಡೆಯವರಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಮತ್ತು ಧರ್ಮೇಂದ್ರಕುಮಾರ್ ಧಾರೆಯೆರೆಯುವ ಕಾರ್ಯದಲ್ಲಿ ಭಾಗಿಯಾದರು.
ಕಳೆದ ಐದು ದಿನಗಳಿಂದ ದೇವಸ್ಥಾನದ ಬಳಿಯಿರುವ ಗೊಡ್ಡುಕಲ್ಲುಗಳಿಗೆ ಪೂಜೆಯನ್ನು ಸಲ್ಲಿಸಲಾಗಿತ್ತು. ಕತ್ತೆಗಳ ವಿವಾಹ ಸಂಬಂಧ ಗ್ರಾಮದಲ್ಲಿ ವಿವಿಧ ಆಚರಣೆ, ಪೂಜೆಗಳನ್ನು ನಡೆಸಲಾಗಿತ್ತು. ಮದುವೆಯ ಮಹೂರ್ತವನ್ನು ಬೆಳಿಗ್ಗೆ 9 ರಿಂದ 10.30 ರವರೆಗೆ ನಿಗಧಿ ಮಾಡಿ ಶುಕ್ರವಾರ ನೂರಾರು ಮಂದಿಯ ಸಮ್ಮುಖದಲ್ಲಿ ವಿವಾಹ ಏರ್ಪಟಿತ್ತಲ್ಲದೇ ಗ್ರಾಮದಲ್ಲಿ ನೂತನ ವಧು, ವರರನ್ನು ಮೆರವಣಿಗೆ ನಡೆಸಲಾಯಿತು.
ಹಿರಿಯರ ಮಾತಿನಂತೆ ಹಿಂದಿನ ಪದ್ಧತಿಯಂತೆ ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆಂಬ ನಂಬಿಕೆಯಿಂದಾಗಿ ಇಂದು ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗಿ ಧರ್ಮೇಂದ್ರಕುಮಾರ್ ತಿಳಿಸಿದರು.
ಚೌಡಸಂದ್ರ ಗ್ರಾಮದ ಮಹಿಳೆಯರು ಜನಪದ ಮಳೆಹಾಡುಗಳನ್ನು ಹಾಡುವ ಮೂಲಕ ವಿವಾಹಕ್ಕೆ ಮೆರುಗು ತಂದರು. ಸ್ಥಳೀಯ ಅರ್ಚಕ ಸುಬ್ರಮಣ್ಯಾಚಾರಿ ಕತ್ತೆ ಮದುವೆಯ ಪೌರೋಹಿತ್ಯ ವಹಿಸಿದ್ದರು. ಮದುವೆಯ ಕಾರ್ಯದಲ್ಲಿ ಭಾಗವಹಿಸಿದವರಿಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಸ್ಥಳೀಯರಾದ ಆರ್.ಕೃಷ್ಣಪ್ಪ, ಜಯರಾಮ್, ಕೆ.ಪ್ರದೀಪ್, ವಿಜಯ್, ಮುನೇಗೌಡ, ಎಂ.ಎನ್.ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಮಂಜುನಾಥ್, ರೂಪೇಶ್, ಆರ್.ಎ.ಉಮೇಶ್, ಮುಖಂಡರಾದ ರೂರ್ಯನಾರಾಯಣಗೌಡ, ಎಚ್.ಟಿ.ನಾರಾಯಣಸ್ವಾಮಿ, ವಿ.ಕೃಷ್ಣಮೂರ್ತಿ, ಗೋಪಾಲ್, ಜನಾರ್ಧನ್, ಸಚಿನ್, ಚೌಡಸಂದ್ರ ಆಂಜನೇಯರೆಡ್ಡಿ, ಸಿ.ಎಚ್.ಆನಂದ್, ನಾರಾಯಣಸ್ವಾಮಿ, ಕಂಬದಹಳ್ಳಿ ಸುರೇಂದ್ರಗೌಡ ಮತ್ತಿತರರು ಹಾಜರಿದ್ದರು. ಕಾಕತಾಳೀಯವೇನೋ ಎಂಬಂತೆ ಸಂಜೆಯ ವೇಳೆಗೆ ಗ್ರಾಮದಲ್ಲಿ ತುಂತುರು ಮಳೆಯಾಯಿತು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here