ಜೀವದಾನ ಮಾಡುವ ರಕ್ತವನ್ನು ಯಾವ ಕಂಪನಿಗಳಲ್ಲಿಯೂ ತಯಾರಿಸಲು ಸಾಧ್ಯವಿಲ್ಲ, ಪ್ರಕೃತಿದತ್ತವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವಂತಹ ರಕ್ತವನ್ನು ಆರೋಗ್ಯವಂತ ವ್ಯಕ್ತಿಗಳು ದಾನಮಾಡಬೇಕು ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಅಧ್ಯಕ್ಷ ಹಾಗೂ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಒಕ್ಕಲಿಗರ ಯುವಸೇನೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಸಂಘಟನೆಗಳು, ರಕ್ತದಾನದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ, ನಗರದ ಯೂನಿಟಿ ಸಿಲ್ಸಿಲಾ ಸಂಘಟನೆ, ದಲಿತ ಸಂಘಟನೆಗಳು, ಸರ್ಕಾರಿ ಅಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘಗಳು ಸೇರಿದಂತೆ ಅನೇಕ ಮಂದಿ ರಕ್ತದಾನದಲ್ಲಿ ಪಾಲ್ಗೊಳ್ಳುವ ಮೂಲಕ, ರಕ್ತದ ಕೊರತೆಯಿಂದಾಗಿ ಕಂಗಾಲಾಗುತ್ತಿರುವ ಗರ್ಭೀಣಿಯರು, ಅಪಘಾತಗಳಿಗೆ ಒಳಗಾಗಿರುವವರು, ದೈಹಿಕವಾಗಿ ಬಲಹೀನರಾಗಿರುವವರು ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ದೇಶಕ್ಕೆ ಹಾಲು, ತರಕಾರಿ ಕೊಟ್ಟಂತಹ ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಿಭಜಿತ ಜಿಲ್ಲೆಯ ಜನತೆ ರಕ್ತದಾನ ಮಾಡುವುದರಲ್ಲಿಯೂ ಪ್ರಥಮ ಸ್ಥಾನದಲ್ಲಿದ್ದೇವೆ. ಸರ್ಕಾರ ನಮಗೆ ನೀರು ಕೊಡಲಿ ಎಂದು ತಿಳಿಸಿದರು.
ಯುವಕರು, ಸರ್ಕಾರಿ ಅಧಿಕಾರಿಗಳು, ಮಹಿಳೆಯರು ರಕ್ತದಾನ ಮಾಡಿದರು. 106 ಯೂನಿಟ್ ರಕ್ತ ಸಂಗ್ರಹವಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜನಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಜಿ.ಶಶಿಕುಮಾರ್, ಒಕ್ಕಲಿಗರ ಯುವಸೇನೆಯ ನಗರ ಘಟಕದ ಅಧ್ಯಕ್ಷ ಪುರುಷೋತ್ತಮ್, ತಾಲ್ಲೂಕು ಉಪಾಧ್ಯಕ್ಷ ಪ್ರಭಾಕರ್, ಪ್ರಧಾನಕಾರ್ಯದರ್ಶಿ ಬಿ.ಮಂಜುನಾಥ್, ಮುದ್ದುರಾಜ್, ಶಂಕರ್, ಗಂಗಿರೆಡ್ಡಿ, ಎಸ್.ಎನ್.ಮರಳಿಮೋಹನ್, ಮುರಳಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -