ರಾಗಿ ಬಣವೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಸುಮಾರು ೨ ಲಕ್ಷ ರೂಗಳಿಗೂ ಹೆಚ್ಚು ಮೌಲ್ಯದ ರಾಗಿ ಬಣವೆ ರಾಗಿಯ ಸಮೇತ ಸುಟ್ಟುಹೋಗಿದೆ.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ರೈತ ವಿ.ಕೆಂಪಯ್ಯ ಎಂಬುವವರಿಗೆ ಸೇರಿದ ರಾಗಿ ಬಣವೆಗೆ ಬುಧವಾರ ರಾತ್ರಿ ಸುಮಾರು ೧೧ ಗಂಟೆಯಲ್ಲಿ ಕಿಡಿಗೇಡಿಗಳು ಬೆಂಕಿಹಚ್ಚಿದ್ದಾರೆ ಎನ್ನಲಾಗಿದ್ದು, ರೈತನ ಕುಟುಂಬದವರು ರಾತ್ರಿ ಸುಮಾರು ೧೨ ಗಂಟೆಯಲ್ಲಿ ಪಂಪ್ಸೆಟ್ನಿಂದ ತೋಟಕ್ಕೆ ನೀರು ಹಾಯಿಸಲು ಹೋದಾಗ ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದನ್ನು ಗಮನಿಸಿದ್ದಾರೆ. ರಾತ್ರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ನೀರನ್ನು ಹಾಕಿ ಬೆಂಕಿ ನಂದಿಸಲು ಸಾಧ್ಯವಾಗದೆ, ಅಗ್ನಿಶಾಮಕ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ.
ಚಿಕ್ಕಬಳ್ಳಾಪುರದಿಂದ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬಣವೆಯು ರಾಗಿಯ ಸಮೇತ ಸಂಪೂರ್ಣವಾಗಿ ಸುಟ್ಟುಹೋಗಿದೆ. ರೈತನಿಗೆ ಸುಮಾರು ೨ ಲಕ್ಷ ರೂಪಾಯಿಗಳು ನಷ್ಟವಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ರೈತ ಸಂಘದಒತ್ತಾಯ: ಕಳೆದ ಎರಡು ತಿಂಗಳ ಹಿಂದೆ ಬಿದ್ದಂತಹ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದಿರುವ ಬೆಳೆಗಳು ನಷ್ಟವಾಗಿದ್ದು, ಈಗ ಕಿಡಿಗೇಡಿಗಳು ರಾಗಿ ಬಣವೆಗೆ ಬೆಂಕಿ ಹಚ್ಚಿರುವುದರಿಂದ ಲಕ್ಷಾಂತರ ರೂಪಾಯಿಗಳ ಬೆಳೆ ನಷ್ಟವಾಗಿದೆ. ಕಂದಾಯ ಇಲಾಖೆಯಿಂದ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಒತ್ತಾಯಿಸಿದ್ದಾರೆ.
- Advertisement -
- Advertisement -
- Advertisement -
- Advertisement -