ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗುತ್ತಿರುವ ಅಲ್ಟ್ರಾ ಮೆಗಾ ಡೈರಿಯು ನಮ್ಮ ಭಾಗದ ಲಕ್ಷಾಂತರ ರೈತರ ಕಷ್ಟವನ್ನು ಕಡಿಮೆ ಮಾಡಲಿದೆ. ಈಗಿನ ರಾಜ್ಯ ಸರ್ಕಾರ 6 ಕೋಟಿ ರೂಗಳನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಆದರೂ ಮೆಗಾ ಡೈರಿ ನಿರ್ಮಿಸಿ ನಮ್ಮ ರೈತರ ಶಕ್ತಿಯೇನೆಂದು ತೋರಿಸುತ್ತೇವೆ ಎಂದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಬುಧವಾರ ನಡೆದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮಲ್ಲಿ ನೀರಿಗೆ ಬರವಿದ್ದರೂ ಹಾಲಿಗೆ ಬರವಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ ಪ್ರತಿ ದಿನ 10 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ರೈತರ ಹೆಚ್ಚಿನ ಬೆಲೆ ಸಿಗಬೇಕಾದರೆ ಹಾಲನ್ನು ವಿವಿಧ ರೀತಿಯಲ್ಲಿ ಸಂಸ್ಕರಿಸಿ ದೇಶ ವಿದೇಶಗಳಿಗೆ ರಫ್ತು ಮಾಡಬೇಕು. ಅದಕ್ಕಾಗಿಯೇ ನಮ್ಮ ರೈತರ ಆಶೀರ್ವಾದದಿಂದ ಅಪರೂಪದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನಾಲ್ಕೂ ಜಿಲ್ಲೆಗಳಲ್ಲಿಯೇ ವಿಶೇಷವಾದ ಮೆಗಾ ಡೈರಿಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯವರು ನಮ್ಮ ಶ್ರಮಕ್ಕೆ 12 ಕೋಟಿ ರೂ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ನಮ್ಮ ಭಾಗದಲ್ಲಿ ಹೈನುಗಾರಿಕೆಯನ್ನು ನಂಬಿದವರ ಬೆಂಬಲಕ್ಕೆ ಬರದಿರುವುದು ದುರಂತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ವತಿಯಿಂದ ಈಚೆಗೆ ದೆಹಲಿಯ ಇಂಟರ್ ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿ ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ಗೆ ಭಾರತ್ ಜ್ಯೋತಿ ಪ್ರಶಸ್ತಿ ನೀಡಿದ್ದರ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು.
ವರ್ಷ ಪೂರ್ತಿ ಹೆಚ್ಚಿನ ಹಾಲು ಸರಬರಾಜು ಮಾಡಿರುವ ರೈತರಾದ ಸುಮಾ ರಂಗನಾಥ್, ನಾಗಮಂಗಲ(102 ಲೀಟರ್ ಸರಾಸರಿ), ಅಶೋಕ್, ಮಳಮಾಚನಹಳ್ಳಿ(33 ಲೀಟರ್), ಶಾರದಮ್ಮ, ಸಾದಲಿ(36 ಲೀಟರ್), ರಮೇಶ, ಚಿಂತಡಪಿ(86 ಲೀಟರ್), ಮುನಿಕೃಷ್ಣ, ಬೆಳ್ಳೂಟಿ(70 ಲೀಟರ್), ಸರೋಜಮ್ಮ, ಕಾಳನಾಯಕನಹಳ್ಳಿ(65 ಲೀಟರ್) ಅವರನ್ನು ಸನ್ಮಾನಿಸಲಾಯಿತು. ರಾಸು ವಿಮೆ ಮಾಡಿಸಿದ್ದ 8 ಮಂದಿ ಫಲಾನುಭವಿಗಳಿಗೆ ತಲಾ 50 ಸಾವಿರ ರೂಗಳ ಚೆಕ್ ವಿತರಿಸಲಾಯಿತು. ಹಾಲು ಉತ್ಪಾದಕರ ಕುಟುಂಬದಲ್ಲಿ ಆದ ಅಕಾಲಿಕ ಮರಣಕ್ಕೆ ಪರಿಹಾರವಾಗಿ ಸೊಣಗಾನಹಳ್ಳಿ ಲಕ್ಷ್ಮೀದೇವಮ್ಮ ಅವರಿಗೆ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ 10 ಸಾವಿರ ರೂಗಳನ್ನು ನೀಡಿದರು.
ಹಾಲು ಶೇಖರಣೆ, ಗುಣಮಟ್ಟ, ತಾಂತ್ರಿಕ ಸೌಲಭ್ಯ ಮುಂತಾದ ವಿಚಾರಗಳ ಬಗ್ಗೆ ಕಾರ್ಯದರ್ಶಿ ಗೋವಿಂದರಾಜು ಸಮಸ್ಯೆಗಳು ಹಾಗೂ ಸಲಹೆಗಳನ್ನು ನೀಡಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ವ್ಯವಸ್ಥಾಪಕ ಡಾ.ವಿ.ಎಂ.ರಾಜು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಉಪವ್ಯವಸ್ಥಾಪಕ ಹನುಮಂತರಾವ್, ಕೆಂಪರೆಡ್ಡಿ, ಅಶ್ವತ್ಥರೆಡ್ಡಿ, ಶ್ರೀನಿವಾಸ್ ಹಾಜರಿದ್ದರು.
- Advertisement -
- Advertisement -
- Advertisement -