ನಗರದ ನೆಹರು ಕ್ರೀಡಾಂಗಣದಲ್ಲಿ ಬುಧವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ರವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್ ಮಾತನಾಡಿದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಮಿಂಚಿನ ಆಟ ನೋಡಿದ ಹಿಟ್ಲರ್ ತಮ್ಮ ದೇಶಕ್ಕೆ ಬರುವಂತೆ ಹಲವು ಆಮಿಷಗಳನ್ನು ಒಡ್ಡಿದರೂ ಅದನ್ನು ತಿರಸ್ಕರಿಸಿ ಭಾರತ ಕಿರೀಟವನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದ ದೇಶಪ್ರೇಮಿ ಎಂದು ಅವರು ಹೇಳಿದರು.
ಧ್ಯಾನ್‌ಚಂದ್ ಹಾಕಿಯ ದಂತಕಥೆ ಆಗಿದ್ದಾರೆ. ಆಗಿನ ಕಾಲದಲ್ಲಿ ಪುಟ್ಬಾಲ್‌ನಲ್ಲಿ ಪೀಲೆ, ಕ್ರಿಕೆಟ್‌ನಲ್ಲಿ ಡೊನಾಲ್ಡ್ ಬ್ರಾಡ್ಮನ್‌ರವರ ಸಾಧನೆಗೆ ಸಮನಾದ ಸಾಧನೆ ಇವರದು. ಧ್ಯಾನ್ ಚಂದ್ ಅವರ ಪುತ್ಥಳಿಯನ್ನು ಮೊದಲ ಸ್ಥಾಪಿಸಿದ್ದು ಆಸ್ಟ್ರೀಯಾ ದೇಶದ ವಿಯನ್ನಾದಲ್ಲಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಖ್ಯಾತಿ ಎಷ್ಟು ಇತ್ತು ಎಂದು ತಿಳಿಯುತ್ತದೆ. ಲಂಡನ್ನಿನ ಹಾಕಿ ಕ್ರೀಡಾಂಗಣಕ್ಕೆ ಇವರ ಹೆಸರನ್ನು ಇಡಲಾಗಿದೆ. ಕ್ರೀಡಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಇವರನ್ನು ಇಡೀ ವಿಶ್ವವೇ ಈಗ ಸ್ಮರಿಸುತ್ತಿದೆ. ದಿಲ್ಲಿಯಲ್ಲಿ ಇವರ ಹೆಸರಿನಲ್ಲಿ ರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಇವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಘೋಷಿಸಿ, ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
ಶಿಡ್ಲಘಟ್ಟದಲ್ಲಿಯೂ ಕ್ರೀಡೆಯಲ್ಲಿ ಸಾಧಕರನ್ನು ತಯಾರು ಮಾಡಿರುವ ತರಬೇತುದಾರರನ್ನು ಗೌರವಿಸುವ ಮೂಲಕ ಕ್ರೀಡಾ ದಿನಾಚರಣೆಯ ಸಂಪ್ರದಾಯವನ್ನು ಈ ಬಾರಿಯಿಂದ ರೂಢಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾ ಶಿಕ್ಷಕ ವಿ.ಪಿ.ನರಸಿಂಹಮೂರ್ತಿರಾವ್ ಅವರನ್ನು ಗೌರವಿಸಲಾಯಿತು. ಕ್ರೀಡಾಪಟುಗಳು ಕೇಕ್ ಕತ್ತರಿಸಿ ಧ್ಯಾನ್‌ಚಂದ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್, ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಗೌರವಾಧ್ಯಕ್ಷ ಮುನಿರಾಜು, ಟಿ.ಟಿ.ನರಸಿಂಹಪ್ಪ, ರಾಮಚಂದ್ರಪ್ಪ, ಶಿವಲಿಂಗ, ವೆಂಕಟೇಶ್, ಮುರಳಿ, ಬಾಬು, ಗಂಗಾಧರ್, ರಾಜಶೇಖರ್, ರಘು ಹಾಜರಿದ್ದರು.
- Advertisement -
- Advertisement -
- Advertisement -