ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಾಕಷ್ಟು ಕುಂದುಕೊರತೆಗಳಿದ್ದು, ಅವನ್ನು ಪರಿಹರಿಸಬೇಕೆಂದು ಸಮಾನ ಮನಸ್ಕರ ಹೋರಾಟ ಸಮಿತಿ ಸದಸ್ಯರು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ಅವರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಹರಾಜು ಪ್ರಕ್ರಿಯೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು. ಮಾರುಕಟ್ಟೆಯಲ್ಲಿ ಹರಾಜಾದ ಗೂಡನ್ನು ನಿಗದಿತ ವೇಳೆಯಲ್ಲಿ ತೂಕ ಮಾಡತಕದ್ಕದ್ದು. ರೇಷ್ಮೆ ಗೂಡಿನ ಮಾರುಕಟ್ಟೆಯ ಪಕ್ಕದಲ್ಲಿ ಸ್ಯಾಂಪಲ್ ನೂಲು ಬಿಚ್ಚಾಣಿಕಾ ಘಟಕವನ್ನು ತೆರವುಗೊಳಿಸುವುದಾಗಿ ಆರು ತಿಂಗಳ ಹಿಂದೆಯೇ ಹೇಳಿದ್ದರೂ ಇನ್ನೂ ತೆರವುಗೊಳಿಸಿಲ್ಲ. ರೈತರ ಗೂಡು ಸ್ಯಾಂಪಲ್ ಹೆಸರಿನಲ್ಲಿ ಮಾರುಕಟ್ಟೆಯ ಹೊರಕ್ಕೆ ಅನಧಿಕೃತವಾಗಿ ಹೋಗುವುದನ್ನು ತಡೆಯಬೇಕು. ಮಾರುಕಟ್ಟೆಗೆ ಬರುವ ರಸ್ತೆಯು ಹದಗೆಟ್ಟಿದೆ. ದೂರದಿಂದ ಬರುವ ರೈತರಿಗೆ ರಾತ್ರಿ ಉಳಿಯಲು ವಿಶ್ರಾಂತಿಗೃಹ ನಿರ್ಮಿಸಬೇಕು. ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಜಾಗವನ್ನು ಕಾಯ್ದಿರಿಸುವ ಮಧ್ಯವರ್ತಿಗಳ ಹಾವಳಿ ತಡೆಯಬೇಕು ಎಂಬ ತೊಂದರೆಗಳ ಪಟ್ಟಿಯನ್ನು ನೀಡಿದರು.
ಮನವಿಯನ್ನು ಸ್ವೀಕರಿಸಿದ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ಮಾತನಾಡಿ, ಇ–ಹರಾಜು ಪ್ರಕ್ರಿಯೆಯು ಪ್ರಾರಂಭವಾಗುತ್ತಿದ್ದು, ಹಲವಾರು ಸಮಸ್ಯೆಗಳು ಇದರಿಂದ ಪರಿಹಾರವಾಗಲಿದೆ. ರಸ್ತೆಯ ಕಾಮಗಾರಿ ಮೂರು ತಿಂಗಳೊಳಗೆ ನಡೆಯಲಿದೆ. ಉಳಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಅಕ್ರಂ ಪಾಷ, ದಾದಾಪೀರ್, ಅಸಾದ್, ಮಂಜುನಾಥ, ಪುರುಷೋತ್ತಮ, ಮಾರಪ್ಪ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -