ರಾಜ್ಯಾದ್ಯಂತ ಬರಗಾಲದ ಹಿನ್ನೆಲೆಯಲ್ಲಿ ರೈತರಿಂದ ಸಾಲವಸೂಲಿ ಮಾಡಲು ಒತ್ತಡ ಹೇರದಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದರೂ ಪಿ.ಎಲ್.ಡಿ. ಬ್ಯಾಂಕ್‌ನಿಂದ ರೈತರಿಗೆ ಸಾಲ ಮರಪಾವತಿ ಮಾಡುವಂತೆ ನೊಟೀಸ್‌ಗಳನ್ನು ಜಾರಿ ಮಾಡಿದ್ದಾರೆ ಎಂದು ರೈತ ಮುಖಂಡರುಗಳು ಆರೋಪಿಸಿದ್ದಾರೆ.
ನಗರದ ಪಿ.ಎಲ್.ಡಿ. ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್‌ನಿಂದ ರೈತರಿಗೆ ನೀಡಿರುವ ನೊಟೀಸ್‌ಗಳಲ್ಲಿ ನಮ್ಮ ಬ್ಯಾಂಕಿನಿಂದ ಸಾಲಗಳನ್ನು ಶೇ. ೬.೪ ಮತ್ತು ೩ ರ ಬಡ್ಡಿದರದಲ್ಲಿ ಪಡೆದಿದ್ದು ಸದರಿ ಸಾಲದ ಕಂತಗಳನ್ನು ಕ್ರಮಬದ್ಧವಾಗಿ ಪಾವತಿಸಿದರೆ ಮಾತ್ರ ಸರ್ಕಾರದಿಂದ ಶೇ. ೬.೪ ಮತ್ತು ೩ ರ ಮೇಲ್ಪಟ್ಟ ಬಡ್ಡಿ ರಿಯಾಯಿತಿಯು ಸರ್ಕಾರ ಭರಿಸುತ್ತಿದೆ. ಮಾರ್ಷ್ ೩೧ ಕ್ಕೆ ಸುಸ್ತಿಯಾಗಿರುವ ಸುಸ್ತಿ ಕಂತುಗಳಿಗೆ ಸರ್ಕಾರ ಪೂರ್ಣ ಬಡ್ಡಿ ಮನ್ನಾ ಮಾಡಿದೆ. ಆದ್ದರಿಂದ ನೀವು ಮಾರ್ಚ್ ೩೧ ರ ಒಳಗೆ ಬ್ಯಾಂಕಿಗೆ ಮರು ಪಾವತಿ ಮಾಡಬೇಕು ಎಂದು ಸೂಚಿಸಿದ್ದಾರೆ.
ತೀವ್ರ ಬರಗಾಲಕ್ಕೆ ಒಳಗಾಗಿರುವ ಈ ಭಾಗದಲ್ಲಿನ ರೈತರು ಮಳೆ, ಬೆಳೆಗಳಿಲ್ಲದೆ ಕಂಗಾಲಾಗಿದ್ದೇವೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬ್ಯಾಂಕುಗಳಿಂದ ಸಾಲ ಪಡೆದುಕೊಂಡು ಇಟ್ಟಿರುವ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಮನೆಗಳಲ್ಲಿದ್ದ ದನಕರುಗಳನ್ನೂ ಮಾರಾಟ ಮಾಡಿದ್ದೇವೆ. ಇನ್ನೆಲ್ಲಿಂದ ಸಾಲ ತೀರಿಸೋದು ಸಾಧ್ಯವಾಗುತ್ತದೆ. ನಮಗೆ ರಿನಿವಲ್ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರೂ ಬ್ಯಾಂಕಿನ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ರೈತರು ಆರೋಪಿಸಿದ್ದಾರೆ.
ನಮಗೆ ರಾಜ್ಯ ಬ್ಯಾಂಕಿನಿಂದ ಬಂದಿರುವ ನಿರ್ದೇಶನದಂತೆ ನಾವು ರೈತರಿಗೆ ನೊಟೀಸ್ ನೀಡಿದ್ದೇವೆ. ಆದರೆ ಸಾಲ ಕಟ್ಟುವಂತೆ ಒತ್ತಡ ಹೇರಿಲ್ಲ. ಅವರ ಮನೆ ಬಾಗಿಲಿಗೂ ಹೋಗಿಲ್ಲ. ರೈತರು ಪಡೆದುಕೊಂಡಿರುವ ಸಾಲಕ್ಕೆ ಶೇ.೧೦ ರಷ್ಟು ಬಡ್ಡಿಯನ್ನು ಸರ್ಕಾರ ನೀಡುತ್ತದೆ. ಶೇ. ೩ ರಷ್ಟು ಬಡ್ಡಿಯನ್ನು ರೈತರು ಪಾವತಿ ಮಾಡಬೇಕು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ನಾವು ನೊಟೀಸ್ ಮೂಲಕ ತಿಳಿಸಿದ್ದೇವೆ. ನಮಗೆ ರಾಜ್ಯ ಬ್ಯಾಂಕಿನಿಂದ ಯಾವುದೇ ನಿರ್ದೇಶನ ಬಂದಿಲ್ಲವೆಂದು ಪಿ.ಎಲ್.ಡಿ. ಬ್ಯಾಂಕ್ ವ್ಯವಸ್ಥಾಪಕ ಮುನಿಯಪ್ಪ ತಿಳಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಸರ್ಕಾರ ಆದೇಶ ಮಾಡಿದರೂ ಕೂಡಾ ಬ್ಯಾಂಕುಗಳ ಅಧಿಕಾರಿಗಳು ಸರ್ಕಾರದ ಆದೇಶಗಳನ್ನು ಕಸದ ಬುಟ್ಟಿಗಳಿಗೆ ಎಸೆದು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಎಚ್ಚರಿಕೆ ನೀಡಬೇಕು. ರೈತರ ಕೃಷಿ ಸಾಲಕ್ಕೆ ಬಡ್ಡಿ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತ ಸಂಘದ ಸದಸ್ಯರು ರೈತರ ಹಿತ ಕಾಪಾಡುವಂತೆ ಕೋರಿ ಮನವಿ ಪತ್ರವನ್ನು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಸಲ್ಲಿಸಿದರು.
ರೈತ ಸಂಘದ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರೈತರಾದ ಮಾರಪ್ಪ, ಎನ್.ನಾಗರಾಜ, ಗೋವಿಂದಪ್ಪ, ನಾಗೇಶ್, ನಾರಾಯಣಸ್ವಾಮಿ, ರಾಜಶೇಖರ್ ಮುಂತಾದವರು ಈ ಸಂದರ್ಭಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -