ಮೂರು ದಶಕಗಳ ನಂತರ ಶಿಡ್ಲಘಟ್ಟ ತಾಲ್ಲೂಕು ಪಂಚಾಯತಿ ಆಡಳಿತ ಜೆಡಿಎಸ್ ತೆಕ್ಕೆಗೆ ಮರಳಿದೆ. ನೂತನ ಅಧ್ಯಕ್ಷರಾಗಿ ಹಂಡಿಗನಾಳ ಕ್ಷೇತ್ರದ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷರಾಗಿ ತುಮ್ಮನಹಳ್ಳಿ ಕ್ಷೇತ್ರದ ಸದಸ್ಯ ಎಚ್.ನರಸಿಂಹಯ್ಯ ಚುನಾಯಿತರಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಒಟ್ಟು ೧೭ ತಾಲ್ಲೂಕು ಪಂಚಾಯತಿ ಸದಸ್ಯರ ಪೈಕಿ ೯ ಮಂದಿ ಜೆಡಿಎಸ್ ಪಕ್ಷದ ಸದಸ್ಯರು ಜಯಗಳಿಸಿದ್ದು, ೮ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದರು. ಒಂದು ಸದಸ್ಯ ಬಲ ಮಾತ್ರ ಜೆಡಿಎಸ್ಗೆ ಹೆಚ್ಚಿಗೆ ಇದ್ದಿದ್ದರಿಂದ ಅಧ್ಯಕ್ಷ ಗಾದಿ ಯಾರಿಗೆ ಒಲಿಯುವುದು ಎಂದು ತೀವ್ರ ಕುತೂಹಲ ಮೂಡಿಸಿತ್ತು. ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ಒಮ್ಮತದ ಅಭ್ಯರ್ಥಿಯಾಗಿ ಹಂಡಿಗನಾಳ ಕ್ಷೇತ್ರದ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ ನಾಮಪತ್ರ ಸಲ್ಲಿಸಿದ್ದರು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮೀಸಲಾಗಿದ್ದರಿಂದ ತುಮ್ಮನಹಳ್ಳಿ ಕ್ಷೇತ್ರದ ಸದಸ್ಯ ಎಚ್.ನರಸಿಂಹಯ್ಯ ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ದೇವರಮಳ್ಳೂರು ಕ್ಷೇತ್ರದ ಸದಸ್ಯೆ ಪಂಕಜ ನಿರಂಜನ್, ಉಪಾಧ್ಯಕ್ಷ ಸ್ಥಾನಕ್ಕೆ ದಿಬ್ಬೂರಹಳ್ಳಿ ಕ್ಷೇತ್ರದ ಸದಸ್ಯೆ ಶಂಕರಮ್ಮ ನಾಮಪತ್ರ ಸಲ್ಲಿಸಿದ್ದರು. ಎರಡು ಕಡೆಗಳಲ್ಲಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆದು, ಕೈ ಎತ್ತುವ ಮೂಲಕ ಸದಸ್ಯರುಗಳು ತಮ್ಮ ಬೆಂಬಲ ಸೂಚಿಸಿದರು, ಜೆಡಿಎಸ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಲಕ್ಷ್ಮೀನಾರಾಯಣ ಅವರಿಗೆ ೯ ಮತಗಳು, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಚ್.ನರಸಿಂಹಯ್ಯ ಅವರಿಗೆ ೯ ಮತಗಳು ಬರುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಸದಸ್ಯರುಗಳು ಆಯ್ಕೆಯಾದರು.
ಸಂಭ್ರಮಾಚರಣೆ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಂದಿ ಜೆಡಿಎಸ್ ಕಾರ್ಯಕರ್ತರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಚುನಾವಣೆಯ ನಿಮಿತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಚಿಕ್ಕಬಳ್ಳಾಪುರ ಜಿಲ್ಲಾ ಉಪವಿಭಾಗಾಧಿಕಾರಿ ಅಮರೇಶ್, ತಹಶೀಲ್ದಾರ್ ಕೆ.ಎಂ.ಮನೋರಮಾ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಕೋಚಿಮುಲ್ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ಮುನಿಯಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮೇಲೂರು ಆರ್.ಎ.ಉಮೇಶ್ ಮುಂತಾದವರು ಅಭಿನಂದಿಸಿದರು.
೧೯೭೮ ರಿಂದ ೧೯೮೩ ರವರೆಗೆ ತಾಲ್ಲೂಕು ಬೋರ್ಡ್ನಲ್ಲಿ ಜನತಾದಳ ಪಕ್ಷದ ಅಧ್ಯಕ್ಷರಾಗಿ ಆನೂರು ಪಿ.ವೀರಪ್ಪ ಹಾಗೂ ಉಪಾಧ್ಯಕ್ಷರಾಗಿ ಸಂಸದ ಕೆ.ಎಚ್.ಮುನಿಯಪ್ಪ ಅಧಿಕಾರ ನಡೆಸಿದ್ದರು. ನಂತರ ಅನೇಕ ವರ್ಷಗಳು ಕಾಂಗ್ರೆಸ್ ತನ್ನ ಆಡಳಿತವನ್ನು ಮುಂದುವರೆಸಿಕೊಂಡು ಬಂದಿತ್ತು. ತಾಲ್ಲೂಕು ಪಂಚಾಯತಿ ಆದ ನಂತರ ಇದೇ ಮೊದಲ ಬಾರಿಗೆ ಜೆಡಿಎಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







