ತಾಲ್ಲೂಕಿನ ಲಕ್ಕಹಳ್ಳಿ ಮತ್ತು ಕೆ.ಮುತ್ತುಗದಹಳ್ಳಿಗೆ ಹೋಗುವ ದಾರಿಯಲ್ಲಿ ಬರುವ ರೈಲ್ವೆ ಅಂಡರ್ ಪಾಸ್ ನಲ್ಲಿ ತುಂಬಿದ್ದ ಹೂಳನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ನೇತೃತ್ವದಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ಭಾನುವಾರ ತೆರವು ಮಾಡಿದರು.
ಮಳೆ ಬಿದ್ದಾಗಲೆಲ್ಲಾ ನೀರಿನಿಂದ ತುಂಬಿಕೊಳ್ಳುತ್ತಿದ್ದ ರೈಲ್ವೆ ಅಂಡರ್ ಪಾಸ್ ಈ ಭಾಗದ ಜನರ ಓಡಾಟಕ್ಕೆ ತೊಂದರೆಯನ್ನುಂಟು ಮಾಡುತ್ತಿತ್ತು. ಹಲವಾರು ದ್ವಿಚಕ್ರ ವಾಹನ ಸವಾರರು, ಸೊಪ್ಪು ಮೂಟೆ ಹೊತ್ತೊಯ್ಯುವವರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದರು. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆಯು ಇಲ್ಲಿ ಇನ್ನಷ್ಟು ತೊಂದರೆಯನ್ನು ತಂದಿತ್ತು. ಸುಮಾರು ಎರಡೂವರೆ ಅಡಿಗಳಷ್ಟು ನೀರು ತುಂಬಿದ್ದರಿಂದ ಜನರ ಓಡಾಟ ದುಸ್ತರವಾಗಿತ್ತು.
ರೈಲ್ವೆ ಅಂಡರ್ ಪಾಸ್ ಆದಂದಿನಿಂದಲೂ ಅವೈಜ್ಞಾನಿಕವಾಗಿ ಇದನ್ನು ನಿರ್ಮಿಸಲಾಗಿದೆ. ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡುತ್ತಿದ್ದರೂ ಮಳೆ ಬಂದಾಗ ಪುನಃ ಸಮಸ್ಯೆ ಎದುರಾಗುತ್ತಿತ್ತು.
ಇದರಿಂದ ಬೇಸತ್ತ ಜನರು ತಾವೇ ಟ್ರಾಕ್ಟರ್ ತಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ನೇತೃತ್ವದಲ್ಲಿ ಚನಿಕೆ ಹಿಡಿದು ಹೂಳನ್ನು ಎತ್ತಿದರು.
‘ರೈಲ್ವೆ ಅಂಡರ್ ಪಾಸ್ ನಿರ್ಮಿಸುವವರು ನೀರು ಸರಾಗವಾಗಿ ಹರಿಯುವ ರೀತಿಯಲ್ಲಿ ನಿರ್ಮಿಸಬೇಕು. ಇಲ್ಲಿನದ್ದು ಬಹು ಕಾಲದ ಸಮಸ್ಯೆಯಾಗಿದೆ. ಈಗೇನೋ ತಾತ್ಕಾಲಿಕವಾಗಿ ನಾವು ಶ್ರಮದಾನ ಮಾಡಿಕೊಳ್ಳುವ ಮೂಲಕ ಸರಿಪಡಿಸಿಕೊಂಡಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರವನ್ನು ಅಧಿಕಾರಿಗಳು ಮಾಡಬೇಕು. ಶಾಸಕರ ಗಮನಕ್ಕೆ ಕೂಡ ತಂದಿದ್ದೇವೆ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ಬೈರೇಗೌಡ, ಮಂಜುನಾಥ್, ಶ್ರೀಧರ್, ದಿವಾಕರ್, ಅಂಬರೀಷ್, ಮಂಜು, ಕಾಮರೆಡ್ಡಿ, ಮುರಳಿ, ಮುನಿಕೃಷ್ಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -