ಸಂಸದರು ಮತ್ತು ಕೆಲ ಪೀಠಾಧಿಪತಿಗಳು ಗ್ರಾಮಗಳನ್ನು ಅಭಿವೃದ್ಧಿಪಡಿಸಲು ದತ್ತು ತೆಗೆದುಕೊಳ್ಳುತ್ತಿರುವುದು ಒಂದೆಡೆಯಾದರೆ, ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿರುವ ಕೆಲ ಸ್ನೇಹಿತರು ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ತಾಲ್ಲೂಕಿನ ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಂಡಿರುವ ಸಂಗತಿ ಈಚೆಗೆ ನಡೆದಿದೆ.
ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದಿ ಇಂಡಿಯನ್ ಡಿಸೈನ್ಸ್ ಎಕ್ಸ್ಪೋರ್ಟ್ಸ್ ಪ್ರೈ.ಲಿಮಿಟೆಡ್ ಕಂಪೆನಿಯ ಉದ್ಯೋಗಿಗಳಾದ ಜಿ.ಎನ್.ನಂದಕುಮಾರ್, ದೇವರಾಜ್, ಸತೀಶ್, ಸುಹಾಲ್ ಮತ್ತು ಇಮ್ರಾನ್ ದತ್ತು ತೆಗೆದುಕೊಂಡಿದ್ದಾರೆ.
ಈಚೆಗೆ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ‘ಶಾಲೆಗೆ ಬೇಕಾಗಿರುವ ಅನುಕೂಲತೆಗಳನ್ನು ದತ್ತು ತೆಗೆದುಕೊಂಡವರು ನೀಡುವುದು ಒಂದು ಅಂಶವಾದರೆ, ಅದನ್ನು ಸದುಪಯೋಗ ಪಡಿಸಿಕೊಳ್ಳುವ ಕಾರ್ಯಬದ್ಧತೆ ಶಾಲಾ ಸಿಬ್ಬಂದಿಯಲ್ಲಿ ಅತಿಮುಖ್ಯವಾಗಿರಬೇಕು. ಇದರ ಒಟ್ಟು ಉದ್ದೇಶ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವುದು ಹಾಗೂ ಕಲಿಕೆಯ ಪ್ರಗತಿ ಹೆಚ್ಚಿಸುವುದಾಗಿದೆ’ ಎಂದು ತಿಳಿಸಿದರು.
ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಎನ್.ನಂದಕುಮಾರ್ ಮಾತನಾಡಿ, ‘ಶಾಲೆಯು ಒಂದು ದೇಗುಲ. ಶಾಲೆಯನ್ನು ಪ್ರವೇಶಿಸುವಾಗ ಶಾರದೆಯ ಗುಡಿಯನ್ನು ಪ್ರವೇಶಿಸುವ ಭಾವನೆ ಇರಬೇಕು. ಈ ಅವಿಭಾಜ್ಯ ಜಿಲ್ಲೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್ ಅವರಂಥ ಎಂಜಿನಿಯರ್, ವಿಜ್ಞಾನಿಗಳು, ಮಾಸ್ತಿಯವರಂಥ ಕನ್ನಡದ ಆಸ್ತಿಯನ್ನು ಕಂಡಿದ್ದೇವೆ. ನಮ್ಮ ಮಣ್ಣಿನಲ್ಲಿ ಅಂಥಹ ಎಷ್ಟೋ ಪ್ರತಿಭಾವಂತರಿದ್ದು ಅವರಿಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವು ನಿಮ್ಮ ಶಾಲೆಯನ್ನು ದತ್ತು ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಿರುವ ಎಲ್ಲಾ ಪೂರಕಾಂಶಗಳನ್ನೂ ಪೂರೈಸುತ್ತೇವೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಎನ್.ನಂದಕುಮಾರ್ ಮತ್ತು ಸ್ನೇಹಿತರು ಶಾಲೆಗೆ ನೂರು ತಟ್ಟೆ ಲೋಟಗಳು, ಮಕ್ಕಳಿಗೆ ಜಾಮಿಟ್ರಿ ಬಾಕ್ಸ್ ಮತ್ತು ಲೇಖನ ಸಾಮಗ್ರಿಗಳನ್ನು ನೀಡಿದರು. ಶಿಕ್ಷಣ ಸಂಯೋಜಕ ಆರ್.ಕೆ.ಶ್ರೀನಾಥ್ ಅವರಿಗೆ ವಿವಿಧ ಶಾಲೆಗಳಲ್ಲಿ ನೀಡಲು 50 ಚಾಪೆಗಳನ್ನು ನೀಡಿದರು.
ಮುಖ್ಯಶಿಕ್ಷಕಿ ಹಂಸವೇಣಿ, ಜಿ.ಎನ್.ಶ್ಯಾಮಸುಂದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -