ಸಸಿ ನೆಡುವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ

0
377

ತಮ್ಮ ಸುತ್ತಮುತ್ತಲಿನ ಪರಿಸರವನ್ನು ನಾಶಮಾಡಿ ಸುಂದರ ಮನೆ, ಕಟ್ಟಡ ನಿರ್ಮಿಸಿಕೊಂಡಿರುವ ನಗರದ ಬಹುತೇಕ ಜನರು ವಯಸ್ಸಾದಂತೆ ಉತ್ತಮ ಗಾಳಿ, ವಾತಾವರಣಕ್ಕಾಗಿ ಗ್ರಾಮೀಣ ಪ್ರದೇಶಗಳ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶೀಲಾ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ವಕೀಲರ ಸಂಘ ಹಾಗು ಉಸಿರಿಗಾಗಿ ಹಸಿರು ತಂಡದ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಸಿ ನೆಡುವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೊಂದು ಸಾಧನೆ ಮಾಡಬೇಕು. ತಮ್ಮ ಜೀವತಾವಧಿಯಲ್ಲಿ ಯಾವುದೇ ಗಿಡ, ಮರಗಳನ್ನು ಕಡಿಯದೇ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸಿದರೆ ಅವನ ಜೀವನ ಸಾರ್ಥಕವಾಗುವುದರ ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗುತ್ತದೆ ಎಂದರು.
ನಗರದ ಬಹುತೇಕ ಜನತೆ ಇತ್ತೀಚೆಗೆ ನಗರ ಪ್ರದೇಶದ ಕಲುಷಿತ ವಾತಾವರಣದಿಂದ ಅನಾರೋಗ್ಯ ಪೀಡಿತರಾಗುತ್ತಿದ್ದು ನಿವೃತ್ತಿ ಜೀವನ ಕಳೆಯಲು ಗ್ರಾಮೀಣ ಪ್ರದೇಶಗಳಲ್ಲಿ ತೋಟದ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ನಾಗರಿಕತೆ ಹೆಸರಲ್ಲಿ ಮರ ಗಿಡಗಳನ್ನು ಕಡಿದಿರುವುದರಿಂದ ನಗರಗಳಲ್ಲಿ ಉತ್ತಮ ಗಾಳಿಯನ್ನು ಉಸಿರಾಡುವುದು ಕಷ್ಟ ಎಂದರು.
ಇನ್ನು ಬಯಲುಸೀಮೆ ಭಾಗದಲ್ಲಿರುವ ನೀಲಗಿರಿಯಿಂದ ಈ ಭಾಗದಲ್ಲಿ ಇನ್ನಷ್ಟು ಅಂತರ್ಜಲ ಕುಸಿತವುಂಟಾಗುತ್ತದೆ. ಹಾಗಾಗಿ ನೀಲಗಿರಿ ಮರಗಳನ್ನು ತೆರವುಗೊಳಿಸಿ ಬೇರೆ ಜಾತಿಯ ಸಸಿಗಳನ್ನು ನೆಡಲು ಈ ಭಾಗದ ಜನರು ಮುಂದಾಗಬೇಕು ಎಂದರು.
ಉಸಿರಿಗಾಗಿ ಹಸಿರು ತಂಡದ ಸಂಚಾಲಕ ಗಂಗಾಧರರೆಡ್ಡಿ ಮಾತನಾಡಿ, ನೀಲಗಿರಿ ಭೂಮಿಯ ಫಲವತ್ತತೆ ಹಾಗೂ ಅಂತರ್ಜಲವನ್ನು ನಾಶಪಡಿಸುತ್ತದೆ. ನೀಲಗಿರಿಯ ಅಕ್ಕ ಪಕ್ಕದ ಕೃಷಿ ಭೂಮಿಗಳಲ್ಲಿ ಯಾವುದೇ ಬೆಳೆಯಿಡಲಾಗುವುದಿಲ್ಲ. ಮುಖ್ಯವಾಗಿ ನೀಲಗಿರಿ ಮರಗಳು ಯಾವುದೇ ಪ್ರಾಣಿ ಮಪಕ್ಷಿಗಳಿಗೆ ಆವಾಸ ಸ್ಥಾನವಲ್ಲ, ಇತರೆ ಜಾತಿಯ ಮರಗಳಂತೆ ಹಣ್ಣು ಹಂಪಲು ಬೆಳೆಯುವ ಗಿಡವಲ್ಲ, ಮತ್ತು ಹಣ್ಣು ಹಂಪಲು ಬೆಳೆಯದ ನೀಲಗಿರಿ ಮರ ಆಮ್ಲಜನಕ ಉತ್ಪಾದನೆಯಲ್ಲಿಯೂ ನಗಣ್ಯ ಎಂದರು.
ಕೇವಲ ಉರವಲು ಸಮಸ್ಯೆಯನ್ನು ಮಾತ್ರ ನಿವಾರಿಸುವ ನೀಲಗಿರಿ ಇದೀಗ ಪ್ರಕೃತಿಯ ಅಸಮತೋಲನೆಗೆ ಕಾರಣವಾಗಿದೆ. ಬಯಲುಸೀಮೆಯ ರೈತರ ಬೆನ್ನೆಲುಬಾದ ಕೃಷಿಯ ಜೀವಾಳವಾಗಿದ್ದ ಅಂತರ್ಜಲಕ್ಕೆ ಮಾರಕವಾಗಿ ಪರಿಣಮಿಸಿದೆ. ಹಾಗಾಗಿ ಈ ಭಾಗದ ರೈತರು ನೀಲಗಿರಿಯನ್ನು ನಿಷೇಧಿಸದ ಹೊರತು ಉಳಿಗಾಲವಿಲ್ಲ. ನೀಲಗಿರಿಯನ್ನು ನಿಷೇಧಿಸಿ ಬೇರೆ ಗಿಡಗಳನ್ನು ನೆಡುವಂತೆ ಜನರಿಗೆ ಅರಿವು ಮೂಡಿಸುವ ಮೂಲಕ ಸಸಿ ನೆಡುವ ಕಾರ್ಯಕ್ಕೆ ನಮ್ಮ ಉಸಿರಿಗಾಗಿ ಹಸಿರು ತಂಡ ಮಾಡುತ್ತಿದೆ ಎಂದರು.
ಹಸಿರು ಉಸಿರು ತಂಡದಿಂದ ನ್ಯಾಯಾಲಯ ಆವರಣದಲ್ಲಿ ಸುಮಾರು ೭೦ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ತಮಗಿರುವ ಅರ್ಧ ಎಕರೆ ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ತೆರವು ಗೊಳಿಸಿ ಬೇರೆ ಜಾತಿಯ ಸಸಿಗಳನ್ನು ನೆಟ್ಟಿರುವಂತಹ ಚಿಕ್ಕಬಳ್ಳಾಪುರ ತಾಲ್ಲೂಕು ಚಲುಮೇನಹಳ್ಳಿಯ ರೈತ ಮಹಿಳೆ ರಾಧಮ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ಸಹಾಯಕ ಸರ್ಕಾರಿ ವಕೀಲೆ ಎಸ್.ಕುಮುದಿನಿ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ವೆಂಕಟರೆಡ್ಡಿ, ಯಣ್ಣಂಗೂರು ಮಂಜುನಾಥ್, ಉಸಿರಿಗಾಗಿ ಹಸಿರು ತಂಡದ ರಾಮಾಂಜಿನಪ್ಪ, ಸಂದ್ಯಾ, ಪಲ್ಲವಿ, ವರಲಕ್ಷ್ಮಿ, ಪವಿತ್ರ, ಚೈತ್ರಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!