17.1 C
Sidlaghatta
Wednesday, February 8, 2023

ಸಿರಿ ಧಾನ್ಯಗಳ ಕೃಷಿಯ ಖುಷಿ

- Advertisement -
- Advertisement -

‘ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ’ ಎಂಬ ಧ್ಯೇಯದಿಂದ ಕೃಷಿ ಮಾಡುವವರು ವಿರಳ. ಈ ಉದ್ದೇಶದಿಂದ ಈಗ ವಿರಳವಾಗಿರುವ ಅತ್ಯಂತ ಪೌಷ್ಠಿಕಾಂಶಗಳಿರುವ ಸಿರಿ ಧಾನ್ಯಗಳನ್ನು ಬೆಳೆಯುತ್ತಾ ಇತರರಿಗೂ ಬೆಳೆಯಲು ಪ್ರೇರೇಪಿಸುತ್ತಿದ್ದಾರೆ ತಾಲ್ಲೂಕಿನ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿ ರೆಡ್ಡಿ,

ತೃಣ ಧಾನ್ಯ ‘ಸಜ್ಜೆ’ಯೊಂದಿಗೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿ
ತೃಣ ಧಾನ್ಯ ‘ಸಜ್ಜೆ’ಯೊಂದಿಗೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿ
ಸಜ್ಜೆ, ಸಾಮೆ, ಊದಲು, ಬರಗು, ನವಣೆ, ಬಿಳಿ ಜೋಳ, ಹಾರಕ, ರಾಗಿ, ಉಚ್ಚೆಳ್ಳು ಮುಂತಾದ ತೃಣ ಧಾನ್ಯಗಳೊಂದಿಗೆ ಮಳೆಯಾಶ್ರಿತ ನಾಟಿ ತಳಿ ದೊಡ್ಡಬೈರನೆಲ್ಲು ಭತ್ತವನ್ನು ಬೆಳೆದಿದ್ದಾರೆ. ತಮ್ಮ ಕುಟುಂಬಕ್ಕೆ ಬಳಸಿ ಉಳಿದಿದ್ದನ್ನು ಆಸಕ್ತ ರೈತರಿಗೆ ಬೀಜದ ರೂಪದಲ್ಲಿ ನೀಡುತ್ತಾರೆ. ಈ ಭಾಗದಲ್ಲಿ ಹೊಸದ್ಯಾವರ ನಡೆದಾಗ, ಮದುವೆ ಮುಂತಾದ ಶುಭ ಕಾರ್ಯಕ್ಕೆ ಮತ್ತು ಯಾರಾದರೂ ಕೊಸೆಯುಸಿರೆಳೆದಾಗಲೂ ಇವರಿಂದ ಭತ್ತದ ತೆನೆಗಳನ್ನು ಪಡೆಯುತ್ತಾರೆ. ಆರ್ಥಿಕ ಉದ್ದೇಶವಿಲ್ಲದೇ ಕೇವಲ ಆಹಾರ, ಆರೋಗ್ಯ ಮತ್ತು ಧಾನ್ಯ ಪಸರಣದ ಉದ್ದೇಶದಿಂದ ಅರ್ಧ ಎಕರೆಯಲ್ಲಿ ಸಜ್ಜೆ, ಆರು ಗುಂಟೆಯಲ್ಲಿ ಸಾಮೆ, ಅರ್ಧ ಎಕರೆಯಲ್ಲಿ ನವಣೆ, ಬಿಳಿ ಜೋಳ ಮತ್ತು ಉಚ್ಚೆಳ್ಳು, ಅರ್ಧ ಎಕರೆಯಲ್ಲಿ ಊದಲು, ಸಾಮೆ ಮತ್ತು ಬರಗು, ಎರಡು ಎಕರೆಯಲ್ಲಿ ನಾಟಿ ತಳಿ ಭತ್ತವನ್ನು ಬೆಳೆದಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ತೃಣಧಾನ್ಯ ವಿಭಾಗದಿಂದ ಹಾಗೂ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯಿಂದ ಸ್ವಲ್ಪ ಸ್ವಲ್ಪ ತಂದ ತೃಣ ಧಾನ್ಯಗಳನ್ನು ಕಳೆದ ಮೂರು ವರ್ಷಗಳಿಂದ ಬೆಳೆಯುತ್ತಾ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯಿಂದ ಇವರಿಗೆ ಪ್ರಮಾಣ ಪತ್ರವೂ ಲಭಿಸಿದೆ.
ತೃಣ ಧಾನ್ಯ ‘ಊದಲು’
ತೃಣ ಧಾನ್ಯ ‘ಊದಲು’
ಗಾತ್ರದಲ್ಲಿ ಕಿರಿದಾದ, ಗುಣ, ಪೌಷ್ಟಿಕಾಂಶಗಳಲ್ಲಿ ಹಿರಿದಾದ ನವಣೆ, ಸಾವೆ, ಸಜ್ಜೆ, ಹಾರಕ, ಕೊರ್ಲೆ, ಬರಗು, ರಾಗಿ, ಜೋಳದಂತಹ ಬೆಳೆಗಳನ್ನು ಕಿರು ಧಾನ್ಯಗಳು ಎನ್ನುತ್ತಾರೆ. ಇವನ್ನು ತೃಣ ಧಾನ್ಯಗಳು ಎಂದೂ ಕರೆಯುತ್ತಾರೆ. ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಹೆಚ್ಚು ಪೌಷ್ಟಿಕಾಂಶಗಳನ್ನು ಒಡಲಲ್ಲಿಟ್ಟು ಕೊಂಡಿರುವ, ನಿಸರ್ಗಕ್ಕೆ ಹಾನಿ ಮಾಡದಂತೆ ಬೆಳೆಯುವ ಈ ಧಾನ್ಯಗಳನ್ನು ‘ಸಿರಿ ಧಾನ್ಯ’ಗಳೆಂದು ಕೂಡ ಕರೆಯುತ್ತಾರೆ.
‘ಕಿರು ಧಾನ್ಯಗಳ ಕೃಷಿ – ಕೇವಲ ಸಾಂಪ್ರದಾಯಕ ಕೃಷಿಯಷ್ಟೇ ಅಲ್ಲ. ಅದೊಂದು ವಿಶಿಷ್ಟ ಕೃಷಿ ಪದ್ಧತಿ. ಈ ಪದ್ಧತಿಯಲ್ಲಿ ಆರರಿಂದ ವಿವಿಧ ಬೆಳೆಗಳನ್ನು ಏಕಕಾಲದಲ್ಲಿ ಒಂದೇ ಪ್ರದೇಶದಲ್ಲಿ ಬಿತ್ತಿ ಬೆಳೆಯಲಾಗುತ್ತದೆ. ಕಿರು ಧಾನ್ಯಗಳು ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯುತ್ತವೆ. ಈ ಬೆಳೆಗಳಿಂದ ಭೂಮಿಯೂ ಸುರಕ್ಷಿತ ಅದನ್ನು ಸೇವಿಸುವರೂ ಆರೋಗ್ಯವಂತರಿರುತ್ತಾರೆ. ಆದರೆ ನಮ್ಮಲ್ಲಿ ರಾಗಿಗೆ ಮಾತ್ರ ಪ್ರಾಧಾನ್ಯತೆ ನೀಡಿ ಇತರ ಕಿರುಧಾನ್ಯಗಳನ್ನು ಮರೆತಿದ್ದಾರೆ’ ಎನ್ನುತ್ತಾರೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿ ರೆಡ್ಡಿ,
ತೃಣ ಧಾನ್ಯ ‘ನವಣೆ’
ತೃಣ ಧಾನ್ಯ ‘ನವಣೆ’
‘ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸಿಕೊಂಡು ಕಿರುಧಾನ್ಯಗಳು ಬೆಳೆಯುತ್ತವೆ. ಕಿರು ಧಾನ್ಯಗಳನ್ನು ಮಳೆಯಾಧಾರಿತ ಪ್ರದೇಶಗಳ ವರದಾನದ ಬೆಳೆಯಾಗಿವೆ. ರಾಸಾಯನಿಕಗಳನ್ನಿವು ಬೇಡುವುದಿಲ್ಲ. ಕಿರು ಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ವಿಟಮಿನ್ ಹಾಗೂ ಖನಿಜಗಳನ್ನು ಹೊಂದಿವೆ. ಮನುಷ್ಯನ ಹಲವು ರೋಗಗಳಿಗೆ ಆಹಾರದ ರೂಪದಲ್ಲೇ ಈ ಧಾನ್ಯಗಳು ಔಷಧವಾಗುತ್ತವೆ.
ನವಣೆಯಲ್ಲಿ 12.3 ಗ್ರಾಂ ಪೋಷಕಾಂಶ, 8 ಗ್ರಾಂ ನಾರಿನಂಶವಿರುತ್ತದೆ. ಹಾಗಾಗಿ ಅಕ್ಕಿಗಿಂತ ಹೆಚ್ಚು ನವಣೆ ಬೇಗ ಜೀರ್ಣವಾಗುತ್ತದೆ. ಸಾಮೆ ಮತ್ತು ನವಣೆ ಅಕ್ಕಿಯಲ್ಲಿನ ಪೋಷಕಾಂಶಗಳು ಮತ್ತಾವುದೇ ಆಹಾರ ಬೆಳೆಗಳಲ್ಲೂ ಇಲ್ಲ. ಕಿರುಧಾನ್ಯಗಳಲ್ಲಿ ಎಲ್ಲ ಪೋಷಕಾಂಶಗಳನ್ನು ಒಟ್ಟಿಗೆ ನೀಡುವ ತಾಕತ್ತಿದೆ. ಹಿಂದೆ ಈ ಧಾನ್ಯಗಳಿಂದ ಭೀಮ ಬಲ ಬರುತ್ತದೆಂದು ನಂಬಿಕೆಯಿಂದ ದೇಹಧಾರ್ಡ್ಯ ಪಟುಗಳು ಕಿರುಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದರು ಮತ್ತು ಎಳೆ ಮಕ್ಕಳಿಗೆ ಇವುಗಳ ಮಿಶ್ರಣದ ಪುಡಿಯ ಪೇಯವನ್ನು ನೀಡುತ್ತಿದ್ದರು’ ಎಂದು ಅವರು ವಿವರಿಸಿದರು.
‘ರೈತ ಪರವಾಗಿದ್ದ ಕಿರು ಧಾನ್ಯಗಳು ಹಸಿರು ಕ್ರಾಂತಿಯ ಹೆಸರಲ್ಲಿ, ಹೆಚ್ಚು ಬೆಳೆಯಬೇಕೆಂಬ ಆತುರದಲ್ಲಿ ರೈತರ ಹೊಲಗಳಿಂದ ನಾಪತ್ತೆಯಾದವು’ ಎನ್ನುತ್ತಾರೆ ಸಾವಯವ ಕೃಷಿ ಪರಿವಾರದ ಸಂಚಾಲಕ ಬೂದಾಳ ರಾಮಾಂಜಿನಪ್ಪ.
‘ಕ್ಷೀಣಿಸುತ್ತಿರುವ ಕಿರು ಧಾನ್ಯಗಳಿಗೆ ಮತ್ತೆ ಜೀವತುಂಬಲೆಂದೇ ‘ಭಾರತೀಯ ಕಿರು ಧಾನ್ಯಗಳ ಜಾಲ’ ಅಸ್ತಿತ್ವಕ್ಕೆ ಬಂದಿದೆ. ಕಿರು ಧಾನ್ಯಗಳ ಮಹತ್ವದ ಪ್ರಚಾರ, ಅವುಗಳ ಸಂಸ್ಕರಣೆ, ವೈವಿಧ್ಯಮಯ ಖಾದ್ಯಗಳ ತಯಾರಿಸುವ ಮೂಲಕ ಆಹಾರ ವೈವಿಧ್ಯವನ್ನು ಅದು ಪರಿಚಯಿಸುತ್ತಿದೆ. ಕರ್ನಾಟಕದಲ್ಲಿ ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗ ಈ ಆಂದೋಲನವನ್ನು ಮುನ್ನೆಡೆಸುತ್ತಿದೆ. ಭವಿಷ್ಯದ ಆಹಾರ ಬೆಳೆಗಳೆಂದೇ ಭಾವಿಸಿರುವ ಈ ‘ಕಿರು ಧಾನ್ಯಗಳ’ ಪುನಶ್ಚೇತನಕ್ಕೆ ರೈತರು ಮುಂದಾಗಬೇಕು’ ಎಂದು ಅವರು ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!