21.7 C
Sidlaghatta
Monday, July 7, 2025

ಹಿತ್ತಲಹಳ್ಳಿ ಸರಕಾರಿ ಗೋಮಾಳದಲ್ಲಿ ಬಸ್ ಡಿಪೋಗೆ ಜಮೀನು ಮಂಜೂರು

- Advertisement -
- Advertisement -

ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಸಾರ್ವಜನಿಕ ಸ್ಮಶಾನವಿರುವ ಸ್ಥಳವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ನಿರ್ಮಿಸಲು ಬಳಸಿಕೊಳ್ಳುತ್ತಿದ್ದಾರೆ. ಸ್ಮಶಾನದ ಸ್ಥಳವನ್ನು ಬಿಟ್ಟು ಬೇರೆ ಸ್ಥಳ ಬಳಸಿಕೊಳ್ಳುವಂತೆ ಗ್ರಾಮಸ್ಥರು ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಹಿತ್ತಲಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ನಿರ್ಮಿಸಲು ತಾಲ್ಲೂಕಿನ ಹಿತ್ತಲಹಳ್ಳಿಯ ಬಳಿ 4 ಎಕರೆ ಜಮೀನನ್ನು ನಿಗದಿಪಡಿಸಲಾಗಿದೆ. ಅಲ್ಲಿರುವ ಹಿಂದುಳಿದ ಹಾಗೂ ಸಾಮಾನ್ಯ ವರ್ಗದವರ ಸ್ಮಶಾನದ ಸ್ಥಳವನ್ನು ಒಳಗೊಂಡಂತೆ ಡಿಪೋಗಾಗಿ ನಕ್ಷೆಯನ್ನು ತಯಾರಿಸಲಾಗಿದೆ. ಈ ರೀತಿ ಮಾಡಿರುವುದರಿಂದ ಮುಂದೆ ಸ್ಮಶಾನದ ಗತಿಯೇನು ಮತ್ತು ಹಿರಿಯ ಪೂಜಾವಿಧಿಯನ್ನು ಹೇಗೆ ನಡೆಸುವುದು ಎಂಬುದು ಗ್ರಾಮಸ್ಥರ ಆತಂಕವಾಗಿದೆ.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿಯ ಹಿತ್ತಲಹಳ್ಳಿಯ ಸರ್ಕಾರಿ ಗೋಮಾಳ ಸರ್ವೆ ನಂ. 117ರಲ್ಲಿ 32.31 ಎಕರೆ ಜಮೀನು ಇದೆ. ಈ ಪೈಕಿ 10 ಗುಂಟೆಯನ್ನು ಪರಿಶಿಷ್ಟ ಜಾತಿ ಪಂಗಡ ಹಾಗೂ 15 ಗುಂಟೆ ಜಮೀನನ್ನು ಸಾಮಾನ್ಯ ವರ್ಗದವರ ಸ್ಮಶಾನಕ್ಕೆ ಮೀಸಲಿಡಲಾಗಿದೆ.

ಸ್ಮಶಾನ ತೆರವು ಆಗುವ ಭೀತಿಯಲ್ಲಿ ಗ್ರಾಮಸ್ಥರು
ಸ್ಮಶಾನ ತೆರವು ಆಗುವ ಭೀತಿಯಲ್ಲಿ ಗ್ರಾಮಸ್ಥರು

ಈ ಸ್ಮಶಾನದಲ್ಲಿ ಗ್ರಾಮಸ್ಥರು ತಮ್ಮ ಹಿರಿಯರ ಅಂತಿಮ ಸಂಸ್ಕಾರ ಮಾಡಿ ಸಮಾಧಿ ನಿರ್ಮಿಸಿದ್ದು, ತಿಥಿ ದಿನಗಳಲ್ಲಿ ಪೂಜೆಯನ್ನು ನಡೆಸುವರು. ಈ ಸ್ಥಳದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದರಿಂದ ಬಸ್‌ ಡಿಪೋಗೆ ಸ್ಥಳ ಮಂಜೂರಾಗುತ್ತಿದ್ದಂತೆ ಎಚ್ಚೆತ್ತ ಗ್ರಾಮಸ್ಥರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ತಹಸೀಲ್ದಾರ್ ಹಾಗೂ ಆನೂರು ಗ್ರಾಮ ಪಂಚಾಯಿತಿ ಸೇರಿದಂತೆ ಸಂಬಂಧಿಸಿದವರಿಗೆ ಅರ್ಜಿ ಸಲ್ಲಿಸಿ ಸ್ಮಶಾನದ ಗಡಿಯನ್ನು ಗುರ್ತಿಸಿಕೊಡುವಂತೆ ಕೋರಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಹತ್ತು ಹಲವು ಬಾರಿ ಅರ್ಜಿ ಹಿಡಿದು ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿದ್ದರೂ, ತಮ್ಮ ಅರ್ಜಿ ಬಗ್ಗೆ ವಿಚಾರಿಸಿದರೂ ಯಾರಿಂದಲೂ ಸ್ಪಷ್ಟವಾದ ಉತ್ತರ ದೊರೆತಿಲ್ಲ. ಜತೆಗೆ ಸ್ಮಶಾನದ ಗಡಿಯನ್ನು ಗುರ್ತಿಸುವ ಕೆಲಸವೂ ಆಗಲಿಲ್ಲ. ಆದರೆ ಈ ಮದ್ಯೆ ಕಳೆದ ಸೋಮವಾರ ಭೂ ಮಾಪಕರ ತಂಡ ಸ್ಥಳಕ್ಕೆ ತೆರಳಿ ಅಳತೆ ಕಾರ್ಯ ನಡೆಸಿದ್ದು ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳವನ್ನು ಗುರ್ತಿಸದೆ ಸ್ಮಶಾನ ಜಾಗ ಸೇರಿಸಿಕೊಂಡಂತೆ ಡಿಫೋಗೆ ಬೇಕಾದ ೪ ಎಕರೆಯನ್ನು ಗುರ್ತಿಸಿ ಗಡಿಯನ್ನು ಗುರ್ತಿಸಿದ್ದಾರೆ. ಇದು ನಮಗೆಲ್ಲಾ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
‘ಸ್ಮಶಾನದ ಜಾಗವನ್ನು ಸೇರಿಸಿಕೊಂಡಂತೆ ಡಿಫೋ ನಿರ್ಮಿಸಿದರೆ ನಮ್ಮ ಹಿರಿಯರ ಸಮಾಧಿಗಳ ಗತಿ ಏನು ಎಂಬ ಚಿಂತೆ ಮನೆ ಮಾಡಿದೆ. ಬೇರೆ ಯಾವುದೆ ಸ್ಥಳವಾದರು ಸ್ಥಳಾಂತರಿಸಬಹುದು. ಆದರೆ ಸಮಾಧಿಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಅಧಿಕಾರಿಗಳು ನಿಮಗೆ ಬೇರೆ ಜಾಗವನ್ನು ಕೊಡುತ್ತೇವೆ. ಕಲ್ಲುಗಳನ್ನು ಬೇರೆ ಕಡೆ ವರ್ಗಾಯಿಸಿ ಪೂಜೆ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಅದು ಹೇಗೆ ಸಾಧ್ಯ. ಹಿತ್ತಲಹಳ್ಳಿ ಬಳಿ ಇರುವ ಸರ್ಕಾರಿ ಗೋಮಾಳದಲ್ಲಿ ೨೫ ಗುಂಟೆ ಜಮೀನನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಜಾತಿಯವರಿಗೆ ಮೀಸಲಿಟ್ಟು ೨೦೧೨ರಲ್ಲಿಯೆ ಮಂಜೂರು ಮಾಡಲಾಗಿದೆ. ಡಿಪೋ ಸೇರಿದಂತೆ ಅಭಿವೃದ್ದಿ ಕಾರ್ಯಕ್ಕೆ ನಮ್ಮದೇನು ಅಡ್ಡಿಯಿಲ್ಲ. ಆದರೆ ಬಸ್ ಡಿಫೋಗೆ ಗುರ್ತಿಸಿರುವ ಜಾಗದಲ್ಲಿ ಇರುವ ನಮ್ಮ ಸ್ಮಶಾನದೊಂದಿಗೆ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಇದು ಕೇವಲ ಸ್ಮಶಾನದ ಜಾಗದ ಪ್ರಶ್ನೆ ಮಾತ್ರವಲ್ಲ, ಮೃತಪಟ್ಟ ಹಿರಿಯರೊಂದಿಗೆ ಹೊಂದಿದ ಭಾವನಾತ್ಮಕ, ಸಾಮಾಜಿಕ ಸಂಬಂಧದ ಪ್ರಶ್ನೆಯಾಗಿದ್ದು ಸಂಬಂಧಿಸಿದವರು ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಹರಿಸಬೇಕಿದೆ’ ಎನ್ನುತ್ತಾರೆ ಹಿತ್ತಲಹಳ್ಳಿ ಗ್ರಾಮಸ್ಥ ಎಚ್‌.ಎಂ.ಮುನಿರಾಜು.
‘ಈ ಬಗ್ಗೆ ಈಗಾಗಲೆ ಗ್ರಾಮಸ್ಥರು ನನ್ನನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಲ್ಲಿ ಸ್ಮಶಾನಕ್ಕೆ ಜಾಗವನ್ನು ಮೀಸಲಿಟ್ಟು ಆದೇಶಿಸಿರುವುದು ನಿಜ. ಇದೀಗ ಅದೇ ಜಾಗದಲ್ಲಿ ಬಸ್ ಡಿಫೋಗೆ ಜಮೀನು ಮಂಜೂರು ಆಗಿದೆ.
ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳದ ನಕ್ಷೆಯನ್ನು ಮಾರ್ಪಡಿಸಲು ಅವಕಾಶ ಇದೆ. ಈ ಬಗ್ಗೆ ಜಿಲ್ಲಾಕಾರಿಗಳೊಂದಿಗೆ ಮಾತನಾಡುತ್ತೇನೆ, ಇದು ಸ್ಮಶಾನದಂತ ಸೂಕ್ಷ್ಮ ಹಾಗೂ ಭಾವನಾತ್ಮಕ ಸಂಬಂಧದ ವಿಷಯವಾಗಿರುವುದರಿಂದ ಯಾವುದೆ ರೀತಿಯ ಆತುರದ ತೀರ್ಮಾನಕ್ಕೆ ಮುಂದಾಗುವುದಿಲ್ಲ’ ಎಂದು ತಹಶೀಲ್ದಾರ್‌ ಅಜಿತ್ ಕುಮಾರ್‌ರೈ ತಿಳಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!