ಹಳೆ ದ್ವೇಷದ ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಗುಂಪೊಂದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮೇಲೆ ಮಂಗಳವಾರ ಹಲ್ಲೆ ನಡೆಸಿದ್ದಾರೆ.
ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಲಸೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಮಂಜುಳ ಹಾಗೂ ಸಹಾಯಕಿ ರಾಮಲಕ್ಷ್ಮಮ್ಮ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.
ವಲಸೇನಹಳ್ಳಿಯ ತಮ್ಮರೆಡ್ಡಿ, ಮದುಸೂಧನ್, ವೆಂಕಟೇಶ್, ಯಾಮಕ್ಕ, ರತ್ನಮ್ಮ, ಶೋಭ, ಪ್ರೀತಿ ಇನ್ನಿತರೆ ಹತ್ತು ಮಂದಿಗೂ ಹೆಚ್ಚು ಅಂಗನವಾಡಿ ಕೇಂದ್ರಕ್ಕೆ ಏಕಾ ಏಕಿ ನುಗ್ಗಿ ಮಕ್ಕಳನ್ನು ಹೊರಗೆ ಕಳುಹಿಸಿದ್ದಾರೆ. ಇದನ್ನು ಪ್ರಶ್ನಿಸಿದ ಅಂಗನವಾಡಿ ಕಾರ್ಯಕರ್ತೆ ಮಂಜುಳ ಹಾಗೂ ಸಹಾಯಕಿ ರಾಮಲಕ್ಷ್ಮಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.
‘ನನ್ನನ್ನು ವಲಸೇನಹಳ್ಳಿ ಅಂಗನವಾಡಿ ಕೆಂದ್ರದಿಂದ ವರ್ಗಾವಣೆ ಮಾಡಲು ಈ ಗುಂಪು ಕಳೆದ ಹಲವು ದಿನಗಳಿಂದಲೂ ಪ್ರಯತ್ನ ಮಾಡುತ್ತಿದ್ದಾರೆ. ಅದು ಫಲ ನೀಡದಿದ್ದಾಗ ಹತಾಶೆಗೊಂಡ ಆವರು ಹೀಗೆ ಕೇಂದ್ರಕ್ಕೆ ನುಗ್ಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆ ಮಂಜುಳ ಪೊಲೀಸರಿಗೆ ದೂರು ನೀಡಿದ್ದಾಳೆ.
ಶಿಶು ಅಭಿವೃದ್ದಿ ಯೋಜನಾಕಾರಿಗಳಿಗೂ ಈ ಬಗ್ಗೆ ದೂರನ್ನು ನೀಡಿ ನನ್ನ ಹಾಗೂ ಸಹಾಯಕಿ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಜರಿಗಿಸಬೇಕು ಮತ್ತು ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕ್ರಮಕ್ಕಾಗಿ ಆಗ್ರಹ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ಮೇಲೆ ಹಲ್ಲೆ ನಡೆದು ಗಾಯಗೊಂಡ ಅವರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದರು.
ಸಂಘದ ಮುಖ್ಯಸ್ಥರಾದ ಸುನಂದಮ್ಮ, ಸೌಭಾಗ್ಯಮ್ಮ ಇನ್ನಿತರರು ಆಸ್ಪತ್ರೆಗೆ ಭೇಟಿ ನೀಡಿ, ಘಟನೆ ಬಗ್ಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೂ ಹಾಗೂ ಶಿಶು ಅಭಿವೃದ್ದಿ ಯೋಜನಾಕಾರಿಗಳಿಗೆ ದೂರು ನೀಡಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.ಜತೆಗೆ ಕಾರ್ಯಕರ್ತೆ ಹಾಗೂ ಸಾಹಯಕಿಗೆ ಸೂಕ್ತ ಬಂದೋಬಸ್ತ್ ನೀಡಿ ಮುಕ್ತವಾಗಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಿಸಬೇಕೆಂದು ಆಗ್ರಹಿಸಿದ್ದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಅಂಗನವಾಡಿ ಕಾರ್ಯಕರ್ತೆ ಮಂಜುಳ ಹಾಗೂ ಅವರ ಮೇಲೆ ಹಲ್ಲೆ ನಡೆಸಿದವರು ದಾಯಾದಿಗಳೆ ಆಗಿದ್ದಾರೆ. ಇವರ ನಡುವೆ ಜಮೀನಿಗೆ ಸಂಬಂದಿಸಿದಂತೆ ವಿವಾದಗಳು ಇದ್ದು, ಈ ಘಟನೆಗೆ ಜಮೀನಿನ ವಿವಾದವೂ ಕಾರಣವಾಗಿದೆ. ಇದೆ ಕಾರಣಕ್ಕೆ ಮಂಜುಳರವರನ್ನು ವರ್ಗಾವಣೆ ಮಾಡಬೇಕೆಂದು ಈ ಗುಂಪು ಹಲವು ಬಾರಿ ಮಂಜುಳ ಮೇಲೆ ದೂರುಗಳನ್ನು ನೀಡಿದ್ದು ನಾನು ಸಹ ಹಲವು ಭಾರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆದರೆ ಆಕೆಯನ್ನು ವರ್ಗಾವಣೆ ಮಾಡುವಂತ ಪ್ರಬಲ ಅಂಶ ದೊರೆತಿಲ್ಲ. ಮಂಜುಳ ವರ್ಗಾವಣೆ ಆಗದ ಕಾರಣ, ಜಮೀನಿನ ವಿವಾದವೂ ಸೇರಿ ಈ ಘಟನೆಗೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ನಾನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್‌ಐ ವಿಜಯ್‌ರವರಿಗೆ ಪತ್ರ ಬರೆದಿದ್ದು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಗೆ ಸೂಕ್ತ ಬಂದೋಬಸ್ತ್ ನೀಡುವಂತೆ ಕೋರಲಾಗಿದೆ ಎಂದು ಸಿಡಿಪಿಒ ಜಿ.ಕೆ.ಲಕ್ಷ್ಮಿದೇವಮ್ಮ ತಿಳಿಸಿದ್ದಾರೆ.
- Advertisement -
- Advertisement -
- Advertisement -