ಟಾಸ್ಕ್ ಫೋರ್ಸ್ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಪರಶಿವಮೂರ್ತಿ ಅಧಿಕಾರಿಗಳಿಗೆ ಸೂಚನೆ
ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅಕ್ರಮ ಮರಳು, ಕಲ್ಲು ಗಣಿಗಾರಿಕೆಯನ್ನು ನಿಯಂತ್ರಿಸಬೇಕೆಂದು ಉಪ ವಿಭಾಗಾಕಾರಿ ಪರಶಿವಮೂರ್ತಿ ಸೂಚಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಚಿಂತಾಮಣಿ ಉಪ ವಿಭಾಗದ ಟಾಸ್ಕ್ ಪೋರ್ಸ್ ಸಮಿತಿಯ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಹಾಗೂ ಕಲ್ಲು ಸಾಗಾಣಿಕೆ ನಡೆಯುತ್ತಿದೆ ಎಂದು ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯಾಚರಣೆ ನಡೆಸಿ ಅಕ್ರಮ ಚಟುವಟಿಕೆಗಳನ್ನು ನಡೆಸಬೇಕು ಎಂದು ತಾಕೀತು ಮಾಡಿದರು.
ಆಂಧ್ರದಿಂದ ದಿನವೂ ೨೫ಕ್ಕೂ ಹೆಚ್ಚು ಲಾರಿಗಳಲ್ಲಿ ಸಿಲ್ಕ್ ಸ್ಯಾಂಡ್ ರವಾನೆಯಾಗುತ್ತಿದ್ದು ಆ ಲಾರಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸ್ಥಳೀಯವಾಗಿ ೨೫-೩೦ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ಆದರೆ ಆ ಅನುಮತಿ ಪತ್ರದ ಹಿಂಭಾಗದಲ್ಲಿ ಮತ್ತೊಂದು ಅನುಮತಿ ಪಡೆದಂತ ಬರವಣಿಗೆ, ಮೊಹರು ಇದ್ದು ಈ ಬಗ್ಗೆ ಸ್ಪಷ್ಟನೆ ಕೋರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ಪತ್ರ ಬರೆದರೂ ಇದುವರೆಗೂ ಅಲ್ಲಿಂದ ನಮಗೆ ಸ್ಪಷ್ಟನೆ ಸಿಗಲಿಲ್ಲ ಎಂದು ಚೇಳೂರು ಪೊಲೀಸ್ ಠಾಣೆಯ ಎಸ್‌ಐ ಆನಂದ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಎಸ್ಪಿ ಚೈತ್ರರವರು, ಅಕ್ರಮ ಮರಳು ಕಲ್ಲು ಗಣಿಗಾರಿಕೆ ತಡೆಯೋದು ನಮ್ಮ ಕೆಲಸಾ ಮಾತ್ರಾನಾ. ನಿಮಗೂ ಜವಾಬ್ದಾರಿ ಇಲ್ಲವಾ ಎಂದು ಪ್ರಶ್ನಿಸಿದರು.
ಮರಳು, ಕಲ್ಲು ಗಣುಗಾರಿಕೆ ತಡೆಯೋದು ಬರೀ ಪೊಲೀಸರ ಕೆಲಸ ಅಂತ ಇತರೆ ಇಲಾಖೆ ಅಧಿಕಾರಿಗಳು ಸುಮ್ಮನಾದರೆ ಅಕ್ರಮವನ್ನು ತಡೆಯೋದು ಸಾಧ್ಯವಿಲ್ಲ. ಸಿಲ್ಕ್‌ಸ್ಯಾಂಡ್ ಹೊತ್ತು ಬರುವ ಎಲ್ಲ ಲಾರಿಗಳನ್ನು ನಾಳೆಯಿಂದಲೆ ತಡೆಯಿರಿ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅಧಿಕೃತವಾಗಿ ಮಾಹಿತಿ ನೀಡಿ ಅವರು ಆ ಲಾರಿಗಳಿಗೆ ನೀಡಿರುವ ಪರವಾನಗಿಯನ್ನು ಪರಿಶೀಲಿಸಿ ಆಂದ್ರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸ್ಪಷ್ಟನೆ ಪಡೆದುಕೊಳ್ಳಲಿ. ಆ ನಂತರ ಮುಂದಿನ ಕ್ರಮ ಜರುಗಿಸಿ ಎಂದು ಅವರು ಸೂಚಿಸಿದರು.
ಎಂ ಸ್ಯಾಂಡ್ ಘಟಕಗಳನ್ನು ಗುರ್ತಿಸುತ್ತಿದ್ದು ಕಟ್ಟಡಗಳನ್ನು ಕಟ್ಟಿಕೊಳ್ಳಲು ಎಂ ಸ್ಯಾಂಡ್‌ನ್ನು ಬಳುಸವಂತೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಸೂಚಿಸಿದರು.
ಡಿವೈಎಸ್ಪಿ ಕೃಷ್ಣಮೂರ್ತಿ, ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ, ಚಿಂತಾಮಣಿ ತಹಶೀಲ್ದಾರ್ ಗಂಗುಲಪ್ಪ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲ್ಲೂಕಿನ ಕಂದಾಯ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -