28.2 C
Sidlaghatta
Monday, October 13, 2025

ಇ–ಹರಾಜಿನ ಲೋಪದೋಷಕ್ಕೆ ಕುಪಿತರಾದ ರೀಲರುಗಳು

- Advertisement -
- Advertisement -

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ಇ–ಹರಾಜಿನ ಸಮಯದಲ್ಲಿ ವೈಫೈ ಆನ್ ಮತ್ತು ಆಫ್ ಮಾಡುವ ಸಮಯದ ವ್ಯತ್ಯಯದಿಂದ ಕುಪಿತಗೊಂಡ ಕೆಲವು ರೀಲರುಗಳು ಮತ್ತು ರೈತರು ಸರ್ವರ್ ಕೋಣೆಯ ಬಳಿ ಜಮಾಯಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ರೇಷ್ಮೆ ಮಾರುಕಟ್ಟೆಯಲ್ಲಿ ಮೊದಲ ಹರಾಜು 10.30ಕ್ಕೆ ಪ್ರಾರಂಭಿಸಿ 11 ಗಂಟೆಯವರೆಗೂ ನಡೆಯುತ್ತದೆ. ಮೊದಲ ಹರಾಜಿನಲ್ಲಿ ಬೆಲೆಯು ರೈತರಿಗೆ ಒಪ್ಪಿಗೆ ಆಗದಿದ್ದಲ್ಲಿ ಎರಡನೇ ಹರಾಜು 11.30 ರಿಂದ 11.50 ರವರೆಗೂ ನಡೆಯುತ್ತದೆ. ಸೋಮವಾರ ಕೆಲವರ ಮೊಬೈಲ್ಗಳಲ್ಲಿ ನೆಟ್ವರ್ಕ್ ಮಂದಗತಿಯಲ್ಲಿದ್ದುದರಿಂದ ಕೆಲ ರೀಲರುಗಳು ಕುಪಿತಗೊಂಡು ಸರ್ವರ್ ಕೋಣೆಯ ಬಳಿ ತೆರಳಿ ಗಲಾಟೆ ಪ್ರಾರಂಭಿಸಿದರು. ರೈತರು ತಮ್ಮ ರೇಷ್ಮೆ ಗೂಡಿಗೆ ಇದರಿಂದ ಬೆಲೆ ಕಡಿಮೆಯಾಗಬಹುದೆಂಬ ಆತಂಕದಿಂದ ಅವರಲ್ಲೂ ಕೆಲವರು ಜೊತೆಗೂಡಿದರು. ಉಪನಿರ್ದೇಶಕ ರತ್ನಯ್ಯಶೆಟ್ಟಿ ರೈತರು ಮತ್ತು ರೀಲರುಗಳಿಗೆ ತೊಂದರೆಯಾಯಿತೆಂದು ಹರಾಜಿನ ಸಮಯವನ್ನು ಹತ್ತು ನಿಮಿಷಗಳ ಕಾಲ ಮುಂದುವರೆಸಿದರು.
ಹರಾಜಿನ ಸಮಯವನ್ನು ಹತ್ತು ನಿಮಿಷ ಹೆಚ್ಚಿಗೆ ಮಾಡಿದ್ದಕ್ಕೆ ಕೆಲ ರೀಲರುಗಳು ಬಂದು ನಮಗೆ ಇದರಿಂದ ತೊಂದರೆಯಾಗುತ್ತದೆ. ಈಗಾಗಲೇ ರೇಷ್ಮೆ ಗೂಡಿನ ಬೆಲೆ ಏರಿ ನಮಗೆ ಕಚ್ಛಾ ರೇಷ್ಮೆಯ ಉತ್ಪಾದನಾ ಬೆಲೆ ಹೆಚ್ಚಿದೆ. ನೀವು ಏಕಾಏಕಿ ನಿರ್ಧಾರ ತೆಗೆದುಕೊಂಡು ನಮಗೆ ಅನ್ಯಾಯ ಮಾಡುತ್ತಿರುವಿರಿ. ಹಳೆಯ ಹರಾಜು ಪದ್ಧತಿಯಲ್ಲೇ ಗೂಡಿನ ಹರಾಜು ಮಾಡಿ ಎಂದರು.
ರೇಷ್ಮೆ ಗೂಡಿನ ಮಾರುಕಟ್ಟೆಗೆ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ಮೊಯ್ನುದ್ದೀನ್, ಲಕ್ಷ್ಮೀಪತಿರೆಡ್ಡಿ, ಪ್ರಭಾಕರ್ ಆಗಮಿಸಿ, ಇ–ಹರಾಜನ್ನು ನಡೆಸಲು ಆಗುವ ತೊಂದರೆಗಳನ್ನು ನಿವಾರಿಸಲಾಗುವುದು. ರೈತರು ಬೆಲೆ ಕಡಿಮೆ ಅನಿಸಿದರೆ ಹರಾಜಿಗೆ ಒಪ್ಪಿಗೆ ಸೂಚಿಸಬೇಡಿ. ರೀಲರುಗಳೇ ಹರಾಜನ್ನು ಕೂಗುವುದರಿಂದ ಗೂಡಿನ ಬೆಲೆ ಹೆಚ್ಚಳ ಎನ್ನುವುದು ಸರಿಯಲ್ಲ. ನಿಮಗೆ ಗಿಟ್ಟುವ ಬೆಲೆಗೆ ನೀವು ಹರಾಜಿನಲ್ಲಿ ಬೀಟ್ ಕೊಡಿ. ಈ ದಿನ ಮಾರುಕಟ್ಟೆಯಲ್ಲಿ 850 ಲಾಟ್ ಬಂದ ಕಾರಣ ಹಾಗೂ ರೀಲರುಗಳು ಸರ್ವರ್ ಕೋಣೆಯ ಬಳಿ ಹರಾಜಿನ ಸಮಯದಲ್ಲಿ ಸೇರಿದ್ದರಿಂದ ಬೆಲೆ ಕಡಿಮೆಯಾಗಿರಬಹುದು. ಹೊಸ ಪದ್ಧತಿಗೆ ಎಲ್ಲರೂ ಒಗ್ಗಿಕೊಳ್ಳಬೇಕು. ಇ–ಹರಾಜಿನಲ್ಲಿ ನಿಜವಾದ ಲೈಸೆನ್ಸ್ ಹೊಂದಿರುವ ರೀಲರುಗಳು ಮಾತ್ರ ಭಾಗವಹಿಸಲು ಸಾಧ್ಯ ಮತ್ತು ಅವರುಗಳು ಮಾತ್ರವೇ ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ ಪಡೆಯಲು ಸಾಧ್ಯ. ಸಾಕಷ್ಟು ಹಣದ ದುರುಪಯೋಗ ಇದರಿಂದ ತಡೆಯಲು ಸಾಧ್ಯ ಎಂದು ರೀಲರುಗಳು ಮತ್ತು ರೈತರಿಗೆ ಮನವರಿಕೆ ಮಾಡಿಕೊಟ್ಟು ಕಳುಹಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!