ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ಗೌರವ ನೀಡುವುದನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಕಮಲಾಕಾಂತ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಗ್ರಾಮಸ್ಥರಿಂದ ಬುಧವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಮಾತೃಭಾಷೆಯಲ್ಲಿ ತಿಳಿಯುವಷ್ಟು, ಕಲಿಯುವಷ್ಟು ಬೇರೆ ಯಾವ ಭಾಷೆಯಲ್ಲೂ ತಿಳಿಯಲು ಸಾಧ್ಯವಿಲ್ಲ. ನಮ್ಮ ಭಾಷೆ, ಸಂಸ್ಕೃತಿಯನ್ನು ನಾವು ಬಳಸಿ ಬೆಳೆಸದೆ ಬೇರೆ ಯಾರು ತಾನೆ ಉಳಿಸಲು ಸಾಧ್ಯ ಹಾಗಾಗಿ ಪ್ರತಿಯೊಬ್ಬರು ಭಾಷೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಕುವೆಂಪು ಶಾಲೆ, ಗ್ರಾಮದ ಅಂಗನವಾಡಿ ಮಕ್ಕಳು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಧ್ವಜಾರೋಹಣದಲ್ಲಿ ಪಾಲ್ಗೊಂಡರು.
ಶಾಲಾ ಮಕ್ಕಳಿಂದ ಜನಪದ ಗೀತೆಗಳು, ಕನ್ನಡ ನಾಡಿನ ಚಲನಚಿತ್ರದ ಹಾಡುಗಳಿಗೆ ನೃತ್ಯ ಆಯೋಜಿಸಲಾಗಿತ್ತು. ಕೋಲಾಟ, ವಿವಿಧ ವೇಶಭೂಷಣಗಳ ಉಡುಪಿನಲ್ಲಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ತುಂಬಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕಮಲಾಕಾಂತ್, ಧಾರ್ಮಿಕ ಮುಖಂಡ ಶಂಕರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿನಾರಾಯಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚೀಮಂಗಲ ಹಾಗು ಸುತ್ತಮುತ್ತಲ ಗ್ರಾಮಗಳ ಮುಖಂಡರೂ ಸೇರಿದಂತೆ ನಾಗರಿಕರು ಪಾಲ್ಗೊಂಡಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







