ಕಾನೂನು ತಿಳಿಯದೇ ಅಪರಾಧ ಮಾಡಿದ್ದರೂ ಅದಕ್ಕೆ ಕ್ಷಮೆ ಇರುವುದಿಲ್ಲ. ಹಾಗಾಗಿ ಎಲ್ಲರೂ ಕಾನೂನು ತಿಳಿವಳಿಕೆ ಹೊಂದಿರುವುದು ಅಗತ್ಯವಾಗಿದೆ. ಗ್ರಾಮಗಳಲ್ಲಿ ಬಂದು ಕಾನೂನಿನ ಬಗ್ಗೆ ತಿಳುವಳಿಕೆಯನ್ನು ಕೊಡುತ್ತಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಜೆ.ಎಂ.ಎಫ್.ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಹಾಲು ಡೈರಿ ಆವರಣದಲ್ಲಿ ಬುಧವಾರ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲರೂ ಕಾನೂನಿನ ಅರಿವು ಹೊಂದುವುದು ಸಂವಿಧಾನದಲ್ಲಿಯೇ ಹೇಳಿದೆ. ಹಾಗಾಗಿ ಕಾನೂನು ರಥದೊಂದಿಗೆ ವಿವಿಧ ಗ್ರಾಮಗಳಿಗೆ ಆಗಮಿಸುತ್ತಿದ್ದು ಕಾನೂನಿನ ಬಗ್ಗೆ ವಕೀಲರು ತಿಳಿಸಿಕೊಡುತ್ತಾರೆ. ಬಡತನವೆಂದು ಕೈಕಟ್ಟಿ ಅನ್ಯಾಯ ಸಹಿಸಬಾರದು. ಜನ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯದ ಬಗ್ಗೆಯೂ ಯೋಚಿಸುವಂತಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡುವುದು ಅತ್ಯವಶ್ಯಕವಾಗಿದೆ. ಇಂದು ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯಗಳು, ಲೈಂಗಿಕ ಶೋಷಣೆಗಳು ನಡೆಯುತ್ತಿರುವುದು ಖೇದದ ಸಂಗತಿ. ತಾಯಂದಿರು ಇದರ ಸೂಕ್ಷ್ಮತೆಯನ್ನು ಅರಿತು ಮಕ್ಕಳ ಚಲನವಲನ, ವರ್ತನೆಗಳ ಮೇಲೆ ನಿಗಾ ವಹಿಸಬೇಕು. ಅಲ್ಲದೇ ತಮ್ಮ ಜೀವಕ್ಕೆ ಮತ್ತು ಆಸ್ತಿ ಪಾಸ್ತಿಗೆ ಹಾನಿ ಉಂಟಾದಲ್ಲಿ ಪ್ರಾಧಿಕಾರ ಅವಶ್ಯಕ ನೆರವು ನೀಡಿ ನ್ಯಾಯ ಒದಗಿಸುತ್ತದೆ ಎಂದರು.
ಕಾರ್ಯಕ್ರಮವನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ಉದ್ಘಾಟಿಸಲಾಯಿತು. ವಕೀಲ ರವೀಂದ್ರನಾಥ್, ಪಂಚಾಯತ್‌ರಾಜ್ ಕಾಯ್ದೆ ಹಾಗೂ ಇತ್ತೀಚಿನ ಯೋಜನೆಗಳ ಕುರಿತು ಮಾತನಾಡಿದರು. ವಕೀಲೆ ವೀಣಾ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಮಹಿಳೆ ಆಸ್ತಿ ಹಕ್ಕು ಕುರಿತು ವಿವರಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ವಕೀಲರಾದ ಆಂಜನೇಯರೆಡ್ಡಿ, ಬೈರಾರೆಡ್ಡಿ, ಲೋಕೇಶ್, ಲಕ್ಷ್ಮೀ, ಗ್ರಾಮ ಪಂಚಾಯಿತಿ ಸದಸ್ಯ ಸಿ.ಎಂ.ಶ್ರೀನಿವಾಸ್, ಸೌಂಧರ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಡಾ.ವಿಜಯ ವೆಂಕಟರಾಮ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಆನಂದ್, ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಚಂದ್ರಶೇಖರ್, ವೆಂಕಟೇಶ್, ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -