ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಮಹಿಳೆಯರ ಸ್ಥಿತಿಗತಿ ತುಂಬಾ ಬದಲಾಗಿದೆ. ಈಗಿನ ಮಹಿಳೆಯರು ವಿದ್ಯಾವಂತರು ಮತ್ತು ಪುರುಷರಿಗೆ ಸಮನಾಗಿ ಹಲವು ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವರು. ಗ್ರಾಮಗಳಲ್ಲೂ ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಗಂಜಿಗುಂಟೆ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆಯ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಛತ್ರದಲ್ಲಿ ಎಫ್.ಇ.ಎಸ್ ಸಂಸ್ಥೆ ಈಚೆಗೆ ಆಯೋಜಿಸಿದ್ದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ನಿರ್ವಹಣೆ ಮೂಲಕ ಗ್ರಾಮೀಣ ಜೀವನಾಧಾರಗಳ ಅಭಿವೃದ್ಧಿ ಕುರಿತು- ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ ಗಂಜಿಗುಂಟೆ, ಕುಂದಲಗುರ್ಕಿ, ಶೆಟ್ಟಿಹಳ್ಳಿ ಮತ್ತು ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ೨೧ ಹಳ್ಳಿಯಲ್ಲಿರುವ ೩೩ ಸ್ವ-ಸಹಾಯ ಸಂಘಗಳಿಂದ ಪ್ರತಿನಿಧಿಗಳು, ಗ್ರಾಮ ಅಭಿವೃದ್ಧಿ ಸಮಿತಿ ಪ್ರತಿನಿಧಿಗಳು, ತಾಲ್ಲೂಕು ಪಂಚಾಯಿತಿ ಸದಸ್ಯರು, ಮಹಿಳಾ ಒಕ್ಕೂಟದ ಸದಸ್ಯರು ಮತ್ತು ಸಮೂದಾಯ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಒಟ್ಟು ೩೦೦ ಜನರು ಈ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಿಳಾ ಒಕ್ಕೂಟದ ಸದಸ್ಯೆ ಲಕ್ಷ್ಮಿದೇವಮ್ಮ ಮಾತನಾಡಿ ಮಹಿಳೆಯರ ಹಕ್ಕುಗಳ ಬಗ್ಗೆ ವಿಶ್ಲೇಶಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಚಾಲಕ ಶಶಿರಾಜ ಕೃಷಿಯಲ್ಲಿ ಮಹಿಳೆಯರ ಪಾತ್ರ ಮತ್ತು ಮಣ್ಣಿನ ಮಹತ್ವದ ಬಗ್ಗೆ ಹಾಗೂ ಮಣ್ಣಿನ ಅಭಿವೃದ್ಧಿ ರೈತರ ಜೀವನದಲ್ಲಿ ಸಂತಸ ತರುತ್ತದೆಯೆಂದು ಕುಲಂಕುಶವಾಗಿ ತಿಳಿಸಿದರು. ಸಂಸ್ಥೆಯ ತರಬೇತಿದಾರ ಪಾರ್ಥ ಮಹಿಳೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಧ್ಯೆ ಇರುವ ಸಂಬಂಧದ ಬಗ್ಗೆ ತಿಳಿಸಿದರು. ಗಂಜಿಗುಂಟೆ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ರವಿಂದ್ರನಾಥ ನಾಯ್ಕ ಬ್ಯಾಂಕಿನಿಂದ ಸಿಗುವಂತಹ ಸೌಲಭ್ಯಗಳು ಮತ್ತು ವಿಮೆ ಬಗ್ಗೆ ವಿವರವಾಗಿ ತಿಳಿಸಿ, ಸ್ವ-ಸಹಾಯ ಸಂಘಗಳು ಮುಂದೆ ಬರಲು ಪ್ರೇರೇಪಿಸಿದರು.
ಎಫ್.ಇ.ಎಸ್ ಸಂಸ್ಥೆಯ ಹಿರಿಯ ಯೋಜನಾಧಿಕಾರಿ ಧನಶೇಕರನ್, ಹಿರಿಯ ಯೋಜನಾಧಿಕಾರಿ ನಿಖತ್ ಪರ್ವಿನ್, ಸಿಬ್ಬಂದಿಗಳಾದ ಸೌಭಾಗ್ಯ, ಗೋಪಿ, ಲೀಲಾವತಿ ಹಾಜರಿದ್ದರು.
- Advertisement -
- Advertisement -
- Advertisement -