ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟುಗಳಿದ್ದಾರೆ. ಅವರಿಗೆ ಪ್ರೋತ್ಸಾಹ ಹಾಗೂ ತರಬೇತಿಯ ಅಗತ್ಯತೆಯಿದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ಪಂಕಜಾ ನಿರಂಜನ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಾಧನೆಗೆ ಪರಿಶ್ರಮ ಮುಖ್ಯ. ಸತತ ಪರಿಶ್ರಮದಿಂದ ತಮ್ಮ ಆಸಕ್ತಿ ಕ್ಷೇತ್ರ ಅಥವಾ ಕ್ರೀಡೆಯಲ್ಲಿ ಸಾಧನೆ ಮಾಡಬಹುದು. ಸರ್ಕಾರದ ಪ್ರೋತ್ಸಾಹದೊಂದಿಗೆ ಕ್ರೀಡಾಸಕ್ತರು ಆಗಾಗ್ಗೆ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಮಕ್ಕಳು ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಪ್ರತಿನಿಧಿಸುವಂತೆ ಮಾಡಬೇಕು ಎಂದರು.
ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕ್ರೀಡಾಸಕ್ತರು ಒಗ್ಗೂಡಿ ಕ್ರೀಡಾಂಗಣದ ಅಭಿವೃದ್ಧಿ ಮತ್ತು ಮಕ್ಕಳಿಗೆ ತರಬೇತಿ, ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುಗಳು ತಾಲ್ಲೂಕಿನಿಂದ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.
ಅಥ್ಲೆಟಿಕ್ಸ್, ವಾಲಿಬಾಲ್, ಖೋಖೋ, ಕಬಡ್ಡಿ, ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್, ಹಾಕಿ, ಥ್ರೋಬಾಲ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ನಡೆಸಲಾಯಿತು.
ರಾಜ್ಯಮಟ್ಟದ ಹಾಕಿ ತರಬೇತುದಾರ ಮುಸ್ಟಾಕ್, ದೈಹಿಕ ಶಿಕ್ಷಕರಾದ ಗಣೇಶ್, ಮಂಜುನಾಥ್, ಎನ್.ನೇತ್ರಾವತಿ, ವಿಠಲ್, ರಂಗನಾಥ್, ಅಗಜಾನನ ಮೂರ್ತಿ, ಅಶ್ವತ್, ನರಸಿಂಹನ್, ಶ್ರೀನಿವಾಸ್ ಹಾಜರಿದ್ದರು.
ಕ್ರೀಡಾಕೂಟದಲ್ಲಿ ಅವ್ಯವಸ್ಥೆ ಆರೋಪ: ಕ್ರೀಡಾಕೂಟಕ್ಕೆ ಸರ್ಕಾರದಿಮದ 50 ಸಾವಿರ ರೂ ಅನುದಾನವಿದ್ದರೂ ಸಮರ್ಪಕವಾಗಿ ಬಳಸಿಲ್ಲ. ಮೂಲಭೂತ ಸೌಕರ್ಯಗಳನ್ನು ಕ್ರೀಡಾಪಟುಗಳಿಗೆ ಒದಗಿಸಿಲ್ಲ ಎಂದು ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಈ ಬಾರಿ ಗುಂಪು ತಂಡಗಳಲ್ಲಿ ವಿಜೇತರಾದವರಿಗೆ ಶೀಲ್ಡ್ ನೀಡುತ್ತಿಲ್ಲ. ಟ್ರಾಕ್ ಗುರುತನ್ನು ಸಮರ್ಪಕವಾಗಿ ಮಾಡದೆ ಶಾಲಾ ಮಕ್ಕಳಿಂದ ಮಾಡಿಸಿದ್ದಾರೆ. ಲಾಂಗ್ ಜಂಪ್ ಪಿಟ್ ನಲ್ಲಿ ಸರಿಯಾಗಿ ಮರಳಿಲ್ಲ. ಖೇಲೋ ಇಂಡಿಯಾ 2016 ರಲ್ಲಿ ನಡೆದಿರುವ ಕ್ರೀಡಾಕೂಟದ ವಿಜೇತರಿಗೆ ಇನ್ನೂ ನಗದು ಬಹುಮಾನ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
- Advertisement -
- Advertisement -
- Advertisement -