20.1 C
Sidlaghatta
Wednesday, October 29, 2025

ಚುರುಕಾದ ಬಿಸಿಲು, ಪ್ರಾರಂಭವಾದ ಮಡಿಕೆಗಳ ಮಾರಾಟ

- Advertisement -
- Advertisement -

ಇನ್ನೂ ಮಹಾಶಿವರಾತ್ರಿ ಹಬ್ಬಕ್ಕೆ ಒಂದು ವಾರವಿದೆ. ಆಗಲೇ ಬಿಸಿಲು ಚುರುಗುಟ್ಟುತ್ತಿದೆ. ಹಗಲಿನಲ್ಲಿ ತಾಪಮಾನ 31 ಡಿಗ್ರಿ ದಾಟಲಾರಂಬಿಸಿದೆ. ಇದರ ಬೆನ್ನಲ್ಲೇ ನಗರದ ಕುಂಬಾರ ಬೀದಿಯಲ್ಲಿ ಬಡವರ ಫ್ರಿಜ್ ಎಂದೇ ಕರೆಯುವ ಮಡಿಕೆಗಳ ಮಾರಾಟ ಶುರುವಾಗಿದೆ. ಎರಡಿದ್ದ ಅಂಗಡಿಗಳು ಈಗ ನಾಲ್ಕೈದು ಆಗಿವೆ.
ಆಧುನಿಕತೆಗೆ ತಕ್ಕಂತೆ ಮಡಿಕೆಗಳಿಗೆ ಹೊಸ ರೂಪ ನೀಡಿ ಜನರನ್ನು ಆಕರ್ಷಿಸಲಾಗುತ್ತಿದೆ. ಮಡಿಕೆಗೆ ಪ್ಲಾಸ್ಟಿಕ್‌ ನಲ್ಲಿ ಜೋಡಿಸಿ ಫಿಲ್ಟರ್‌ನಿಂದ ನೀರು ಪಡೆಯುವ ಹಾಗೆಯೇ ಸಿದ್ಧಪಡಿಸಿದ್ದಾರೆ. ಈಗಾಗಲೇ ವಿದ್ಯುತ್‌ ಕೈಕೊಡಲು ಪ್ರಾರಂಭವಾಗಿದೆ. ಫ್ರಿಜ್ ಬದಲು ಮಡಿಕೆಯ ನೀರು ಒಳ್ಳೆಯದು ಎಂಬ ಭಾವನೆ ಇರುವುದರಿಂದ ಈಗಾಗಲೇ ಮಡಿಕೆಗಳ ಮಾರಾಟ ಪ್ರಾರಂಭವಾಗಿದೆ. ಮಣ್ಣಿನ ಮಡಿಕೆಯ ಕೆಳಭಾಗದಲ್ಲಿ ಮರಳು ಹಾಕಿ ರಾಗಿ ಪೈರು ಬೆಳೆಸಿ ಸದಾ ತಂಪಾದ ನೀರನ್ನು ಕುಡಿಯಲು ಜನ ಇಷ್ಟಪಡುತ್ತಾರೆ.

ಶಿಡ್ಲಘಟ್ಟದ ಕುಂಬಾರಪೇಟೆಯಲ್ಲಿ ಮಡಿಕೆಗೆ ಪ್ಲಾಸ್ಟಿಕ್‌ ನಲ್ಲಿ ಜೋಡಿಸಿ ಮಾರಾಟ ಮಾಡಲಾಗುತ್ತಿದೆ

ನಗರದ ಕುಂಬಾರಪೇಟೆ ಬೀದಿಯು ಮೊದಲು ಮಡಿಕೆ ಮಾಡುವವರಿಗೆ ಹೆಸರಾಗಿತ್ತು. ಈಗ ಕೇವಲ ಇಬ್ಬರು ಮಾತ್ರ ಅಂಗಡಿಗಳನ್ನು ಹೊಂದಿದ್ದಾರೆ. ಅವರೂ ಅಷ್ಟೆ ಕುಂದಲಗುರ್ಕಿ, ಪಲ್ಲಿಚೇರ್ಲುಗಳಿಂದ ತಂದು ಇಲ್ಲಿ ಮಾರುತ್ತಾರೆ. ಬೇಸಿಗೆ ಕಾರಣದಿಂದ ಅಂಗಡಿಗಳು ದುಪ್ಪಟ್ಟಾಗಿವೆ. ಸೋಮವಾರ ಸಂತೆಯ ದಿನ ಹಳ್ಳಿಗಳಿಂದ ತಂದು ಮಾರಾಟ ಮಾಡುತ್ತಾರೆ.
ವರ್ಷದ ಬೇಸಿಗೆ ತಿಂಗಳಿನಲ್ಲಿ ಮಾತ್ರವೇ ಮಡಿಕೆಗಳ ಮಾರಾಟ ನಡೆಯುತ್ತದೆ. ಬೇಸಿಗೆ ಬಂತೆಂದರೆ ಎಲ್ಲರ ಚಿತ್ತ ಮಣ್ಣಿನ ಮಡಿಕೆ ಕೊಳ್ಳುವುದರತ್ತ ಇರುತ್ತದೆ. ಕುಂಬಾರರು ಮತ್ತು ವ್ಯಾಪಾರಿಗಳು ಸ್ವಲ್ಪ ಮಟ್ಟಿಗೆ ಹಣ ಮಾಡಿಕೊಳ್ಳಲು ಇದು ಸಕಾಲ. ಮಡಿಕೆ ಕೊಂಡೊಯ್ದು ಅದರ ನೀರನ್ನು ಕುಡಿದು ಬಾಯಾರಿಕೆ ತಣಿಸಿಕೊಳ್ಳಲು ಜನರು ಕಾತರರಾಗಿದ್ದಾರೆ.
‘ಈಗಲೂ ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಮಾಡಲು ಮಡಿಕೆಗಳನ್ನು ಬಳಸಲಾಗುತ್ತದೆ. ಮಡಿಕೆಯಲ್ಲಿಟ್ಟ ನೀರು ಫ್ರಿಜ್ ನೀರಿನಷ್ಟೇ ತಂಪಾಗಿರುತ್ತದೆ. ಜನರು ಸಹ ಸಾಮಾನ್ಯ ಮಡಿಕೆ ಕೊಳ್ಳುವುದಕ್ಕಿಂತ ಆಕರ್ಷಕವಾಗಿರುವ ಮತ್ತು ನಲ್ಲಿ ಸೌಲಭ್ಯವಿರುವ ಮಡಿಕೆ ಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಮಕ್ಕಳು ನೀರಿನಲ್ಲಿ ಕೈಯಿಟ್ಟು ಕೊಳೆ ಮಾಡುವುದು ಇದರಿಂದ ತಪ್ಪುತ್ತದೆ. ನಮಗೆ ವರ್ಷದಲ್ಲಿ ಬೇಸಿಗೆಯಲ್ಲಷ್ಟೇ ಮಡಿಕೆಗೆ ಬೇಡಿಕೆ ಬರುತ್ತದೆ. ನಲ್ಲಿ ಹಾಕಿದ ಮಡಿಕೆಯನ್ನು 250 ರೂಗಳಿಗೆ ಮಾರುತ್ತೇವೆ. ಈಗ ಬಿಸಿಲು ಏರುತ್ತಿರುವುದರಿಂದ ಇದರ ವ್ಯಾಪಾರ ಶುರುವಾಗಿದೆ. ನಮ್ಮ ತಂದೆಯ ಕಾಲದಲ್ಲಿ ಇಲ್ಲಿ ತಯಾರಿಸುತ್ತಿದ್ದರು. ಆದರೆ ನಮ್ಮ ಕಾಲಕ್ಕೆ ಇದನ್ನು ನಂಬಿ ಬದುಕಲು ಕಷ್ಟವೆಂದು ಕೇವಲ ಕೊಂಡು ತಂದು ಮಾರುತ್ತಿದ್ದೇವೆ’ ಎನ್ನುತ್ತಾರೆ ಕುಂಬಾರಪೇಟೆಯ ಪ್ರದೀಪ್‌.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!