ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ನಾಮಪತ್ರ ಹಿಂಪಡೆಯುವ ದಿನದವರೆಗೂ ಅಧಿಕೃತ ಅಭ್ಯರ್ಥಿಗಳು ಯಾರೂ ಎನ್ನುವುದು ಗೊತ್ತಾಗುವುದಿಲ್ಲ ಅಂತಹುದರಲ್ಲಿ ಈಚೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಲಿ ಶಾಸಕರ ಹೆಸರಿದೆ ಎಂದ ಮಾತ್ರಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬಿ.ಎನ್.ರವಿಕುಮಾರ್ ಅವರ ಅಭಿಮಾನಿಗಳು ಧೃತಿಗೆಡಬೇಕಾಗಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ದೊಣ್ಣಹಳ್ಳಿ ರಾಮಣ್ಣ ಹೇಳಿದರು.
ಈಚೆಗೆ ಜೆಡಿಎಸ್ ಪಕ್ಷದಿಂದ ಪ್ರಕಟಿಸಲಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿ.ಎನ್.ರವಿಕುಮಾರ್ ಬದಲಿಗೆ ಹಾಲಿ ಶಾಸಕ ಎಂ.ರಾಜಣ್ಣ ಹೆಸರು ಘೋಷಿಸಿರುವ ಹಿನ್ನಲೆಯಲ್ಲಿ ಅಸಂತೃಪ್ತಿ ವ್ಯಕ್ತಪಡಿಸಿ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಜೆಡಿಎಸ್ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಬಿ.ಎನ್.ರವಿಕುಮಾರ್ರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಾಗಿತ್ತು. ಈ ಬಗ್ಗೆ ವರಿಷ್ಠರೂ ಸಹ ಸಹಮತ ವ್ಯಕ್ತಪಡಿಸಿದ್ದರು. ಆದರೆ ಫೆ ೧೭ ರ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಶಿಡ್ಲಘಟ್ಟದ ಅಭ್ಯರ್ಥಿಯಾಗಿ ಹಾಲಿ ಶಾಸಕ ಎಂ.ರಾಜಣ್ಣರ ಹೆಸರನ್ನು ಪ್ರಕಟಿಸಿರುವುದು ಕ್ಷೇತ್ರದ ಬಹಳಷ್ಟು ಕಾರ್ಯಕರ್ತರಿಗೆ ಬೇಸರವಾಗಿದೆ.
ಯಾವುದೇ ಕಾರಣಕ್ಕೂ ನಾವೇ ಬೆಳೆಸಿದ ಪಕ್ಷ ಹಾಗು ಪಕ್ಷದ ವರಿಷ್ಠರ ವಿರುದ್ದ ಮಾತನಾಡುವುದು ಸರಿಯಲ್ಲ. ಬದಲಿಗೆ ಬಿ.ಎನ್.ರವಿಕುಮಾರ್ ರವರು ಈ ಹಿಂದಿನಂತೆಯೇ ಕ್ಷೇತ್ರದಾದ್ಯಂತ ಸಮಾಜಸೇವಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುಬೇಕು ಎಂದರು.
ಸಭೆಯಲ್ಲಿ ಸೇರಿದ್ದ ಹಲವಾರು ಮಂದಿ ಅಭಿಮಾನಿಗಳು ಪಕ್ಷೇತರವಾಗಿ ಕಣಕ್ಕೆ ಇಳಿಯಬೇಕು ಎಂದು ಒತ್ತಾಯಿಸಿದರೆ, ಹಿರಿಯರು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ, ಫೆಬ್ರುವರಿ ೨೫ ರ ಭಾನುವಾರ ಕ್ಷೇತ್ರದ ದಿಬ್ಬೂರಹಳ್ಳಿಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದು, ಕಾರ್ಯಕರ್ತರ ಒಮ್ಮತದ ಅಭಿಪ್ರಾಯದಂತೆ ಬಿ.ಎನ್.ರವಿಕುಮಾರ್ ಮುಂದಿನ ಹೆಜ್ಜೆ ಇಡಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿ.ಎನ್.ರವಿಕುಮಾರ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದು ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಕ್ಷೇತ್ರದಾದ್ಯಂತ ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ಈಗಲೂ ಕ್ಷೇತ್ರದ ಜನತೆ ನೀವು ಮನೆಯಲ್ಲಿರಿ ಎಂದರೆ ಮನೆಯಲ್ಲಿರುತ್ತೇನೆ. ಜನತೆ ಬಯಸಿದಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ಹಾಗೂ ಪಕ್ಷದ ವರಿಷ್ಠರ ಬಗ್ಗೆ ಯಾರೂ ಕೆಟ್ಟದ್ದಾಗಿ ಮಾತಾಡುವುದು ಬೇಡ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಮಿನಾರಾಯಣ, ಸದಸ್ಯರಾದ ರಾಜಶೇಖರ್, ಮುನಿಯಪ್ಪ, ಮುಖಂಡರಾದ ಕದಿರಿಯೂಸುಫ್, ಆದಿಲ್ಪಾಷ, ಸೈಯ್ಯದ್, ತುಳುವನೂರು ರವಿ, ಬುರುಡುಗುಂಟೆ ಸೀನಪ್ಪ, ರಾಜೇಶ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







