ನಂದಿ ಬೆಟ್ಟದ ತಪ್ಪಲಿನಲ್ಲಿ ಜನಿಸಿ ತಮಿಳುನಾಡಿನ ಸಮುದ್ರಕ್ಕೆ ಸೇರುತ್ತಿರುವ ದಕ್ಷಿಣ ಪಿನಾಕನಿ ನದಿ ಹಿಂದೆ ಈ ಭಾಗದ ಜನರ ಜೀವನದಿಯಂತಿತ್ತು. ಇದರ ಪುನಃಶ್ಚೇತನ ಮಾಡುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಟ್ರಸ್ಟ್ ಅಧ್ಯಕ್ಷ ಎನ್.ವಿಶ್ವನಾಥನ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಅಭಿಯಾನದ ಬಗ್ಗೆ ರೈತರೊಂದಿಗೆ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ನಂದಿಬೆಟ್ಟದ ವಾಯುವ್ಯ ದಿಕ್ಕಿನಲ್ಲಿರುವ ಚನ್ನರಾಯಸ್ವಾಮಿಬೆಟ್ಟದಲ್ಲಿ ಹುಟ್ಟುವ ದಕ್ಷಿಣ ಪಿನಾಕಿನಿ ನದಿಯ ಜಲಾನಯನ ಪ್ರದೇಶಗಳಲ್ಲಿ ಬರುವ ೧೨ ತಾಲ್ಲೂಕುಗಳ ಪೈಕಿ ಗ್ರಾಮೀಣ ಭಾಗದ ೯ ತಾಲ್ಲೂಕುಗಳ ಒಟ್ಟು ೭೦೦ ಕಿರು ಜಲಾನಯನ ಪ್ರದೇಶಗಳ ಅಭಿವೃದ್ಧಿಯನ್ನು ಈ ಅಭಿಯಾನದಲ್ಲಿ ಕೈಗೊಳ್ಳುತ್ತಿದ್ದೇವೆ ಎಂದರು.
ಈ ಹಿಂದೆ ಈ ಭಾಗದ ಜನರ ಜೀವನಾಡಿಯಾಗಿದ್ದ ದಕ್ಷಿಣ ಪಿನಾಕಿನಿ ನದಿ ಪಾತ್ರ ಮುಚ್ಚಿ ಹೋಗಿರುವುದರಿಂದ ಈ ಭಾಗದಲ್ಲಿ ಬೀಳುವ ಮಳೆ ಶೇಖರಣೆಯಾಗದೇ ವ್ಯರ್ಥವಾಗಿ ಹರಿದುಹೋಗುತ್ತಿದೆ. ಹಾಗಾಗಿ ಹರಿದು ಹೋಗುವ ನೀರನ್ನು ನದಿ ಭಾಗದಲ್ಲಿ ಸಂರಕ್ಷಿಸಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನದಿ ಪುನಃಶ್ಚೇತನ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಟ್ರಸ್ಟ್ನ ಸದಸ್ಯ ಸಾಹುಕಾರ್ ಮಾತನಾಡಿ, ಮುಂಬರುವ ಡಿಸೆಂಬರ್ ಕೊನೆಯ ವಾರ ಅಥವ ಜನವರಿ ಮೊದಲನೆ ವಾರ ನದಿ ಪುರ್ನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದ ಸ್ಥಳೀಯ ರೈತರು ಸೇರಿದಂತೆ ನಾಗರಿಕರು ನದಿ ಪುನಃಶ್ಚೇತನ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂದರು. ಲಕ್ಷಾಂತರ ಜನರ ಜೀವನಾಡಿಯಾಗಿದ್ದ ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನಗೊಳಿಸುವುದರಿಂದ ಮುಂದಿನ ತಲೆಮಾರಿಗೆ ಉತ್ತಮ ಪರಿಸರ ಮತ್ತು ಜಲಮೂಲಗಳನ್ನು ಉಳಿಸಿ ಕೊಡಬೇಕಾದ ಅಗತ್ಯತೆ ಪ್ರತಿಯೊಬ್ಬರ ಮೇಲಿದೆ ಎಂದರು.
ನಿವೃತ್ತ ಕೃಷಿ ವಿಜ್ಞಾನಿ ಪ್ರಭಾಕರಶೆಟ್ಟಿ ಮಾತನಾಡಿ, ಈ ಹಿಂದೆ ಪ್ರತಿ ನೂರು ಜನಗಳಿಗೆ ೫೦೦ ಮರಗಳಿದ್ದವು. ಆದರೆ ಇದೀಗ ಪ್ರತಿ ನೂರು ಜನರಿಗೆ ಕೇವಲ ೧೭ ಮರಗಳಿವೆ. ಇದರಿಂದ ಸಕಾಲದಲ್ಲಿ ಮಳೆಗಳಾಗುತ್ತಿಲ್ಲ. ಹಾಗಾಗಿ ಮೊದಲು ಅರಣ್ಯ ಪುನರುಜ್ಜೀವನಕ್ಕೆ ಮೊದಲ ಆಧ್ಯತೆ ನೀಡಲಾಗುತ್ತದೆ. ನಂತರ ನದಿ ಕಾಲುವೆಗಳ ಅಗಲೀಕರಣ ಸೇರಿದಂತೆ ಕೆರೆಗಳ ಒತ್ತುವರಿ ತೆರವು ಹಾಗು ಕೆರೆ ಪುನಃಶ್ಚೇತನಕ್ಕೆ ನಾಗರಿಕರ ಸಹಕಾರದೊಂದಿಗೆ ಮುಂದಾಗಲಿದ್ದೇವೆ ಎಂದರು.
ಟ್ರಸ್ಟ್ನ ಎಂ.ಎಸ್.ಸ್ವಾಮಿನಾಥನ್, ಶ್ಯಾಂ ಪ್ರಸಾದ್, ಸರ್ವೇಶ್, ತಂಗರಾಜು, ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಸದಸ್ಯ ಆರ್.ಎ.ಉಮೇಶ್, ರೂಪೇಶ್, ವಂದೇ ಭಾರತಂ ನ ಅಧ್ಯಕ್ಷ ಬಿ.ಎಚ್.ಲೋಕೇಶ್, ವಿ.ಎಸ್.ಪ್ರಕಾಶ್, ಪ್ರದೀಪ್, ಗಣಪತಿ, ಶೋಭಾ ಕಾರಂತ್, ಗಾಯಿತ್ರಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಎನ್.ಮಂಜುಳ, ಕಾರ್ಯದರ್ಶಿ ಸಿದ್ದಣ್ಣ, ಮಳ್ಳೂರು ಹರೀಶ್ ಸಂವಾದ ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -