ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶದ ದಲಿತ ಕೇರಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಸೇರಿದಂತೆ ಗ್ರಾಮಕ್ಕೊಂದು ಸ್ಮಶಾನ ಕಲ್ಪಿಸಿಕೊಡಲು ಮೊದಲ ಆಧ್ಯತೆ ನೀಡಲಾಗುವುದು ಎಂದು ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ತಿಳಿಸಿದರು.
ನಗರದ ಗ್ರಾಮಾಂತರ ಪೋಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪೋಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಇರುವ ಸ್ಮಶಾನಗಳ ಒತ್ತುವರಿ ತೆರವುಗೊಳಿಸುವುದು, ಅಗತ್ಯ ಮೂಲಭೂತ ಸವಲತ್ತುಗಳ ಬಗ್ಗೆ ಕ್ರಮ ಜರುಗಿಸಲಾಗುವುದು. ನಂತರ ಎಲ್ಲಿ ಸ್ಮಶಾನ ಇಲ್ಲವೋ ಅಂತಹದರ ಬಗ್ಗೆ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ಪರಿಶಿಷ್ಠ ಜಾತಿ ಹಾಗೂ ಪಂಗಡದ ಜನಾಂಗದವರು ತಮಗೆ ಪ್ರತ್ಯೇಕ ಸ್ಮಶಾನ ಬೇಕು ಎನ್ನುವುದನ್ನು ಬಿಡಬೇಕು. ತಮ್ಮ ಮನಸ್ಸಿನಲ್ಲಿರುವ ಇಂತಹ ಕೀಳರಿಮೆಯನ್ನು ಬಿಟ್ಟು ಸರ್ಕಾರದ ನೀತಿ ನಿಯಮದಂತೆ ಗ್ರಾಮಕ್ಕೊಂದು ಸ್ಮಶಾನ ಇರುತ್ತದೆ, ಅದೇ ಸ್ಮಶಾನವನ್ನು ತಾವು ಬಳಸಲು ಮುಂದಾಗಬೇಕು. ಯಾರಾದರೂ ಅಡ್ಡಿ ಪಡಿಸಿದರೆ ನಮ್ಮ ಗಮನಕ್ಕೆ ತನ್ನಿ ಅದನ್ನು ನಾವು ಪರಿಹರಿಸಿಕೊಡುತ್ತೇವೆ. ಹಾಗಾಗಿ ದಲಿತರು ಎಂಬ ಭಾವನೆಯನ್ನು ತಮ್ಮ ಮನಸ್ಸುಗಳಿಂದ ಕಿತ್ತೊಗೆಯಿರಿ ಎಂದರು.
ಮರಳು ಮಾಫಿಯಾ ಬಗ್ಗೆ ಮಾತನಾಡಿದ ಅವರು ಈ ಹಿಂದೆ ತಾವು ಕೆಲಸ ಮಾಡಿದ ನೆರೆಯ ದೇವನಹಳ್ಳಿಯಲ್ಲಿ ಸುಮಾರು ೩೦೦ ಕ್ಕೂ ಹೆಚ್ಚು ಕ್ರಿಮಿನಲ್ ಕೇಸು ದಾಖಲಿಸುವ ಮೂಲಕ ಮರಳು ಹಾಗು ಕಲ್ಲು ದಂಧೆಕೋರರನ್ನು ಹೊರಗಟ್ಟಲಾಗಿತ್ತು. ಇದೀಗ ಅಂತಹವರೆಲ್ಲಾ ನೆರೆಯ ಚಿಕ್ಕಬಳ್ಳಾಪುರ ಪೆರೇಸಂದ್ರದ ಬಳಿ ಕಲ್ಲು ಕ್ವಾರಿ ನಡೆಸುತ್ತಿದ್ದಾರೆ. ತಾಲ್ಲೂಕಿನಲ್ಲಿ ನಡೆಯುತ್ತಿರುವ ಮರಳು ದಂಧೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ನಡೆಸಲಾಗುವುದು ಎಂದರು.
ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಮಾತನಾಡಿದ ಅವರು ಈ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಕಾವಲು ಸಮಿತಿ ರಚಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು. ಮುಖ್ಯವಾಗಿ ಕಾವಲು ಸಮಿತಿ ರಚಿಸುವಾಗ ಒಳ್ಳೆಯ ವ್ಯಕ್ತಿಗಳನ್ನು ನೇಮಿಸಿದಲ್ಲಿ ಅನುಕೂಲವಾಗುತ್ತದೆ ಎಂದರು.
ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ಮಾತನಾಡಿ, ದಲಿತರ ವ್ಯಾಜ್ಯಗಳನ್ನು ಬಗೆಹರಿಸಿ ಮತ್ತು ಅವರಿಗೆ ಸೂಕ್ತ ರಕ್ಷಣೆ ನೀಡುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಲಿದ್ದಾರೆ ಎಂದರು.
ಯಾರದೋ ಒತ್ತಡಗಳಿಗೆ ಮಣಿದು ಸುಳ್ಳು ದೂರು ನೀಡುವವರ ಮೇಲೆ ನಿಗಾವಹಿಸಲಾಗುವುದು ಹಾಗು ಅಕ್ರಮ ಮಧ್ಯಮಾರಾಟದ ಬಗ್ಗೆ ನಾವು ತೆಗೆದುಕೊಳ್ಳುವ ಕಠಿಣವಾದ ತೀರ್ಮಾನಗಳಿಗೆ ನಾಗರಿಕರೂ ಸೇರಿದಂತೆ ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.
ದಲಿತ ಮುಖಂಡರಾದ ಮೇಲೂರು ಮಂಜುನಾಥ್, ಮುನಯ್ಯ, ದ್ಯಾವಕೃಷ್ಣ, ಅರುಣ್‌ಕುಮಾರ್, ದಡಂಘಟ್ಟ ತಿರುಮಲೇಶ್, ಲಕ್ಷ್ಮಿನಾರಾಯಣ, ಕೃಷ್ಣಮೂರ್ತಿ ಮತ್ತಿತರರು ಸಭೆಯಲ್ಲಿ ಮಾತನಾಡಿ ಅಕ್ರಮ ಮದ್ಯ ಮಾರಾಟ, ಸ್ಮಶಾನ ಒತ್ತುವರಿ, ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಲಂಚಾವತಾರ, ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಕಳಪೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ನಗರ ಠಾಣೆ ಸಬ್‌ಇಸ್ಪೆಕ್ಟರ್ ನವೀನ್, ದಿಬ್ಬೂರಹಳ್ಳಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ವಿಜಯ್‌ರೆಡ್ಡಿ, ಗ್ರಾಮಾಂತರ ಠಾಣೆ ಸಬ್‌ಇಸ್ಪೆಕ್ಟರ್ ಪ್ರದೀಪ್ ಪೂಜಾರಿ, ಅರಣ್ಯ ಇಲಾಖೆಯ ರಾಮಾಂಜನೇಯುಲು, ಆಹಾರ ಇಲಾಖೆ ನಿರೀಕ್ಷಕ ಪ್ರಕಾಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -