ಗ್ರಾಮಾಂತರ ಪ್ರದೇಶಗಳಲ್ಲಿ ದೇಶೀಯ ಕ್ರೀಡೆಗಳನ್ನು ಆಯೋಜನೆ ಮಾಡುವ ಮೂಲಕ ಯುವಜನತೆಯಲ್ಲಿ ಕ್ರೀಡಾಭಿಮಾನ ಮೂಡಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ದಿ.ಡಾ.ಸಂಜಯ್ ದಾಸ್ ಗುಪ್ತಾ ಗೆಳೆಯರ ಬಳಗದಿಂದ ಆಯೋಜನೆ ಮಾಡಲಾಗಿದ್ದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ದಿ.ಡಾ.ಸಂಜಯ್ ದಾಸ್ ಗುಪ್ತಾ ಅವರು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ನೀಡಿದ್ದ ಹೆಚ್ಚಿನ ಪ್ರೋತ್ಸಾಹ ಇಲ್ಲಿನ ಜನರ ಮನದಾಳದಲ್ಲಿ ಉಳಿದಿರುವುದು ಶ್ಲಾಘನೀಯವಾಗಿದೆ.
ಯುವಜನರು ಕ್ರಿಕೆಟ್ ನಂತಹ ಕ್ರೀಡೆಗಳಿಂದಾಗಿ ದೇಶೀಯ ಕ್ರೀಡೆಗಳಾದ ಕಬ್ಬಡ್ಡಿ, ಖೋ ಖೋ, ಅಥ್ಲೇಟಿಕ್ಸ್ ನಂತಹ ಕ್ರೀಡೆಗಳಿಂದ ವಿಮುಖರಾಗುತ್ತಿದ್ದಾರೆ. ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ ಕಬ್ಬಡ್ಡಿ ಪಂದ್ಯಾವಳಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿಕೊಂಡು ದೇಶದ ತಂಡ ಪ್ರಶಸ್ತಿಯನ್ನು ಗಳಿಸಿಕೊಂಡಿರುವುದು ನಮ್ಮ ಹೆಮ್ಮೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಯುವಜನರನ್ನು ಪ್ರೋತ್ಸಾಹ ಪಡಿಸುವಂತಹ ವೇದಿಕೆಗಳು ಸಿದ್ದಗೊಳ್ಳಬೇಕು ಎಂದರು.
ಸುತ್ತಮುತ್ತಲ ಗ್ರಾಮಗಳಿಂದ ಯುವಜನರು ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕಬ್ಬಡಿ ಪಂದ್ಯಾವಳಿಯ ಪ್ರಥಮ ಬಹುಮಾನದ ಪ್ರಾಯೋಜಕತ್ವವಾಗಿ ೨೫ ಸಾವಿರ ರೂಪಾಯಿಗಳ ಚೆಕ್ಕನ್ನು ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಯಿತು. ತೀರ್ಪಗಾರರಾಗಿ ಸ್ವಾಮಿ ವಿವೇಕಾನಂದ ಶಾಲೆಯ ದೈಹಿಕ ಶಿಕ್ಷಕರುಗಳಾದ ಯು.ಪಿ.ನರಸಿಂಹಮೂರ್ತಿ, ಎಂ.ಎನ್.ಚಂದ್ರಶೇಖರ್ ಕಾರ್ಯ ನಿರ್ವಹಿಸಿದರು.
ಎಂ.ಎಸ್.ವೆಂಕಟೇಶಮೂರ್ತಿ, ಎಂ.ಎಲ್.ಮುನಿರಾಜು, ನಾಗರಾಜು, ನಾರಾಯಣಸ್ವಾಮಿ, ಸಾಯಿಬಾಬಾ, ಮಳ್ಳೂರು ಮಂಜುನಾಥ್, ಎಂ.ಬಿ.ಬೈರೇಗೌಡ, ಕೆ.ಎಂ,ಮಂಜುನಾಥ್, ಪ್ರತಾಪ್, ಬೈರಾರೆಡ್ಡಿ, ಚಂದ್ರಶೇಖರ್, ಎಂ.ಎನ್.ರೆಡ್ಡಿ, ಚಲಪತಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -