ನಗರದ ಸಂತೆ ಆವರಣದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಚರಂಡಿಯಿಂದ ಸಂತೆಗೆ ಬರುವ ವ್ಯಾಪಾರಸ್ಥರು ಮತ್ತು ಗ್ರಾಹಕರು ಪರದಾಡುವ ಸ್ಥಿತಿ ಉಂಟಾಗಿದ್ದು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಇಲ್ಲವಾದಲ್ಲಿ ವಾರದ ಸಂತೆ ನಡೆಯುವುದನ್ನು ಸ್ಥಗಿತಗೊಳಿಸಿ ಎಂದು ಆಗ್ರಹಿಸಿ ಸೋಮವಾರ ಸಂತೆ ವ್ಯಾಪಾರಿಗಳು ನಗರಸಭೆ ಮುಂಭಾಗ ಧರಣಿ ನಡೆಸಿದರು.
ಎಂದಿನಂತೆ ಸೋಮವಾರದ ಸಂತೆಗೆ ತರಕಾರಿ ತಂದಿದ್ದ ವ್ಯಾಪಾರಸ್ಥರು ಸಂತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯಿಂದ ಸಂತೆಗೆ ತರಕಾರಿ ಹೊತ್ತು ತರುವ ವಾಹನಗಳು ಸುಲಭವಾಗಿ ಬರಲು ಆಗುವುದಿಲ್ಲ ಹಾಗು ಸಂತೆಯೊಳಗೆ ತರಕಾರಿ ಅಂಗಡಿ ಹಾಕುವ ಸಣ್ಣ ಪುಟ್ಟ ವ್ಯಾಪರಸ್ಥರ ಬಳಿ ಗ್ರಾಹಕರು ಹೋಗಲು ಸಹ ಆಗದೇ ಸಂತೆಯ ಹೊರಗಡೆಯೇ ತರಕಾರಿ ಕೊಂಡು ಹೋಗುವುದರಿಂದ ಸಣ್ಣ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಇಲ್ಲವೇ ಸಂತೆ ನಡೆಯುವುದನ್ನು ಒಂದೆರಡು ವಾರಗಳ ಕಾಲ ಸ್ಥಗಿತಗೊಳಿಸಿ ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿಯನ್ನು ಆಳಿಸಿದ ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ ಮಾತನಾಡಿ, ನಗರದ ರಾಷ್ಟ್ರೀಯ ಹೆದ್ದಾರಿ ೨೩೪ ಕ್ಕೆ ಹೊಂದಿಕೊಂಡಂತೆ ಇರುವ ಅಮ್ಮನಕೆರೆಯಿಂದ ಗೌಡನಕೆರೆಯವರೆಗೂ ಇರುವ ರಾಜಕಾಲುವೆ ಕಾಮಗಾರಿ ಚಾಲನೆಯಲ್ಲಿದೆ. ನಗರದ ಗಾರ್ಡನ್ ರಸ್ತೆ ಡಾಂಬರೀಕರಣ, ಸಂತೆ ಮೈದಾನದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗಳು ಶುರುಮಾಡಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ನಾಗರೀಕರು ಸಹಕರಿಸಬೇಕು ಎಂದರು. ಇನ್ನು ಸಂತೆ ಮೈದಾನದಲ್ಲಿರುವ ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಿ ಕೆ.ಎನ್.ಮುನೀಂದ್ರ, ಮುನಿರಾಜು, ನಗರಸಭೆ ಪೌರಾಯುಕ್ತ ಎಚ್.ಎ.ಹರೀಶ್, ಸದಸ್ಯ ವೆಂಕಟಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -