Kambadahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ, ಕಾಳಿಕಾಂಬಾದೇವಿಯ ದೀಪೋತ್ಸವ ಹಾಗೂ ಜಾತ್ರಾಮಹೋತ್ಸವ ಮಂಗಳವಾರ ಅದ್ದೂರಿಯಾಗಿ ನಡೆಯಿತು.
ಕಾಳಿಕಾಂಬ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು, ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದ್ದ ಬುಟ್ಟಿಗಳಲ್ಲಿ ತಂಬಿಟ್ಟಿನ ದೀಪಗಳನ್ನು ಹೊತ್ತುಕೊಂಡು, ತಮಟೆ ವಾದನಗಳೊಂದಿಗೆ ಮೆರವಣಿಗೆಯ ಬಂದು, ದೇವರಿಗೆ ದೀಪಗಳು ಬೆಳಗಿದರು.
ದೀಪಗಳು ಸಾಗುವ ರಸ್ತೆಯಲ್ಲಿ ರಂಗೋಲಿಗಳನ್ನು ಬಿಡಿಸಿ, ತಳಿರು ತೋರಣಗಳನ್ನು ಕಟ್ಟಿ, ಮೆರವಣಿಗೆ ನಡೆಸಿದರು. ಗ್ರಾಮದ ಹಿರಿಯರು, ದೀಪೋತ್ಸವಗಳಿಗೆ ಚಾಲನೆ ನೀಡಿ, ದೀಪಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದೀಪೋತ್ಸವಗಳ ವೀಕ್ಷಣೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಬಂದಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಹಳ್ಳಿಗಳಲ್ಲಿ ಪ್ರತಿಯೊಬ್ಬರೂ ಸಾಮರಸ್ಯದಿಂದ ಅಣ್ಣ ತಮ್ಮಂದಿರಂತೆ ಜೀವಿಸುವುದನ್ನು ರೂಢಿಸಿಕೊಳ್ಳುವುದರ ಜೊತೆಗೆ, ದೇವತಾ ಕಾರ್ಯಗಳನ್ನೂ ಒಗ್ಗಟ್ಟಿನಿಂದ ಆಚರಣೆ ಮಾಡುವ ಮೂಲಕ ಗ್ರಾಮಕ್ಕೆ ಒಳಿತು ಮಾಡಬೇಕಿದೆ. ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಇಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಯುವಜನರಿಗೆ ಉತ್ತಮ ಮಾರ್ಗದರ್ಶನವಾಗುತ್ತದೆ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡಬೇಕು ಎಂದರು.
ಗ್ರಾಮದ ಮುಖಂಡರಾದ ಕೆ.ಎಂ.ಜಗದೀಶ್, ಕೆ.ಬಿ.ಶ್ರೀನಿವಾಸ್, ಕೆ.ವಿ.ಪ್ರಕಾಶ್, ಲಕ್ಷ್ಮೀಪತಿ, ಬಚ್ಚೇಗೌಡ, ಕೆ.ಎಂ.ರಾಜಗೋಪಾಲ್, ಕೆ.ಎಂ.ಸುರೇಂದ್ರ, ಮುನೇಗೌಡ, ದೇವರಾಜ್, ನಾರಾಯಣಪ್ಪ, ರಮೇಶ್, ಶೇಖರ್, ಮುರಳಿ, ಮಂಜುನಾಥ್, ದರ್ಶನ್ ಹಾಜರಿದ್ದರು.