ನಗರದಲ್ಲಿ ಕ್ಯಾಟರ್ ಬಿಲ್ ಅಥವಾ ಕವಣೆ ಎಂದು ಕರೆಯುವ ಕೋತಿ ಹಾಗೂ ಹಕ್ಕಿಗಳನ್ನು ಓಡಿಸುವ ಪುರಾತನ ಸಾಧನದ ಮಾರಾಟ ನಡೆಸುತ್ತಿದೆ.
ಆಂಧ್ರದ ತಿರುಪತಿ ಕಡೆಯಿಂದ ಹೊಟ್ಟೆಪಾಡಿಗಾಗಿ ಕವಣೆಗಳನ್ನು ಮಾರುತ್ತಾ ಬಂದಿರುವ ಮರಿಯಣ್ಣ ನಗರಿಗರಿಗೆ ಬಾಲ್ಯವನ್ನು ನೆನಪಿಸುತ್ತಾ ಹಳ್ಳಿಗರಿಗೆ ಅವಶ್ಯ ಸಾಧನ ಬಿಕರಿ ಮಾಡುತ್ತಿದ್ದಾರೆ.
ಪಂಜೆ ಮಂಗೇಶರಾವ್ ಅವರ “ಹುತ್ತರಿ ಹಾಡು” ಎಂಬ ಕವನದಲ್ಲಿ ಹುಲಿಯ ಹಾಲನು ಮೆದ್ದಂತಹ ಹೆಬ್ಬಾವನು ಕವಣೆ ಬೀಸಲು ಬಳಸಿದಂತಹ ವೀರರಾದ ಕೊಡವರ ವರ್ಣನೆಯಿದೆ. ತೆಲುಗಿನಲ್ಲಿ ‘ಒಡಿಸಿಲಿ’ ಎಂದು ಕರೆಯುವ ಕವಣೆಯನ್ನು ಬೆಳೆಗಳಿಗೆ ಹಾನಿ ಮಾಡುವ ಪ್ರಾಣಿ ಮತ್ತು ಪಕ್ಷಿಗಳನ್ನು ಬೆದರಿಸಲು ಮತ್ತು ಓಡಿಸಲು ತೋಟದ ಕಾವಲಿನವರು ಬಳಸುವ ಸ್ಥಳೀಯ ಉಪಕರಣ.
ಇಂಗ್ಲೀಷ್ನ ‘ವಿ’ ಆಕಾರದ ಕೋಲಿನ ಎರಡು ತುದಿಗೆ ರಬ್ಬರನ್ನು ಕಟ್ಟಿರುತ್ತಾರೆ. ಅವೆರಡೂ ರಬ್ಬರನ್ನು ಚರ್ಮದ ತುಂಡಿನಿಂದ ಬಂಧಿಸಿರುತ್ತಾರೆ. ಚರ್ಮದ ತುಂಡಿನಲ್ಲಿ ಕಲ್ಲನ್ನಿಟ್ಟು ಎಳೆದು ಬಿಟ್ಟರೆ ನಿಶ್ಚಿತ ಗುರಿಯನ್ನು ಕಲ್ಲು ಮುಟ್ಟುತ್ತದೆ. ಮೊದಲು ಬೇಕೆನಿದ ಹಣ್ಣು ಕಾಯಿಗಳನ್ನು ಬೀಳಿಸುವಂಥಹ ಅದ್ಭುತ ಗುರುಕಾರರಿದ್ದರು ಎಂದು ಹಿರಿಯರು ನೆನೆಯುತ್ತಾರೆ.
ಕೋವಿಯಂತಹ ಅಪಾಯಕಾರಿ ಮತ್ತು ಪ್ರಾಣಹಾನಿ ಮಾಡುವ ಸಾಧನಕ್ಕಿಂತ ‘ಇತ್ತ ಹಾವೂ ಸಾಯಬಾರದು ಅತ್ತ ಕೋಲೂ ಮುರಿಯಬಾರದು’ ಎಂಬಂತೆ ಬಳಸುವ ಈ ಕವಣೆ ನಮ್ಮ ಗ್ರಾಮೀಣರ ಪರಿಸರ ಪ್ರೇಮಿ ಅನ್ವೇಷಣೆ.
‘ನಾವು ಹಿಂದೆ ಮನೆಗಳ ಬಳಿ ಬರುತ್ತಿದ್ದ ಕೋತಿಗಳನ್ನು ಬೆದರಿಸಿ ಓಡಿಸಲು ಈ ಕ್ಯಾಟರ್ ಬಿಲ್ ಬಳಸುತ್ತಿದ್ದೆವು. ತೋಟಗಳಲ್ಲಿ ಇದು ಬಹಳ ಸಹಾಯಕ ಸಾಧನ. ಹುಣಸೆಕಾಯಿ, ಮಾವಿನಕಾಯಿಗಳನ್ನು ಇದರಿಂದ ಕಲ್ಲೆಸೆದು ಬೀಳಿಸಿ ತಿಂದದ್ದು ಮರೆಯಲಾಗದು. ನಾವು ಬಾಲ್ಯದಲ್ಲಿ ಬಳಸುತ್ತಿದ್ದ ಈ ಸಾಧನವನ್ನು ಈಗ ನಮ್ಮ ಮಕ್ಕಳಿಗೆ ತೋರಿಸಲಾದರೂ ಒಂದೊಂದು ಕೊಳ್ಳಬೇಕಿದೆ’ ಎನ್ನುತ್ತಾರೆ ಶ್ರೀನಿವಾಸ್.
‘ಮೊದಲಿನಂತೆ ಈಗ ಕ್ಯಾಟರ್ ಬಿಲ್ನ ವ್ಯಾಪಾರವಿಲ್ಲ. ಆದರೂ ನಾವು ಹೊಟ್ಟೆಪಾಡಿಗಾಗಿ ಊರೂರು ತಿರುಗಿ ವ್ಯಾಪಾರ ಮಾಡುತ್ತೇವೆ. ಮೂರ್ನಾಕು ಗುಣಮಟ್ಟದ್ದು ತಯಾರಿಸಿ ವಿವಿಧ ಬೆಲೆಗಳಿಗೆ ಮಾರುತ್ತೇವೆ’ ಎಂದು ಮರಿಯಣ್ಣ ತಿಳಿಸಿದರು.
- Advertisement -
- Advertisement -
- Advertisement -