ಪ್ರಕೃತಿಯಲ್ಲಿ ವಿವಿಧ ಮಾಲಿನ್ಯಗಳಿರುವಂತೆ ಭಾಷೆಯ ಬೆಳವಣಿಗೆಗೆ ಕುಂಠಿತಪ್ರಾಯವಾಗುವ ನಡೆ, ನುಡಿ, ಲಿಪಿ ಮಾಲಿನ್ಯಗಳಿಂದ ವಿದ್ಯಾರ್ಥಿಗಳು ದೂರವಾಗಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಭಾಷೆಯನ್ನು ಬೆಳೆಸುವ ಹಾಗೂ ಸ್ಪಷ್ಟ ಉಚ್ಛಾರಣೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಮಾತೃ ಭಾಷಾ ದಿನದ ಅಂಗವಾಗಿ ‘ಕನ್ನಡ ಪದ ಸಂಪತ್ತು’ ಎಂಬ ವಿಷಯವಾಗಿ ನಡೆದ ಉಪನ್ಯಾಸ ಕಮ್ಮಟದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.
ಸಮಯದ ಉಪಯುಕ್ತತೆ, ಭಾಷೆಯ ಹಾಗೂ ಬರವಣಿಗೆಯ ಶ್ರೇಷ್ಠತೆ, ಕನ್ನಡ ಸರಳ ಪದಗಳಲ್ಲಿನ ವಿಶೇಷ ಅರ್ಥ ಶ್ರೀಮಂತಿಕೆ, ನಡೆ ನುಡಿ ಲಿಪಿ ಮಾಲಿನ್ಯಗಳಿಂದುಂಟಾಗುವ ಅನರ್ಥಗಳನ್ನು, ಕನ್ನಡ ಪದ ಸಂಪತ್ತಿನ ಹಿರಿಮೆಯನ್ನು ಮತ್ತು ನಿಜ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಿಳಿಯಬೇಕು.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕೆಂದಿರುವ ಗೀತೆಯ ಮೋಡಿಗಿಂತ, ಕನ್ನಡ ನಾಡಿನಲ್ಲಿ ಹುಟ್ಟಿದರೆ ಸರ್ವಮಾನ್ಯ ಕನ್ನಡಿಗರಾಗುವ ದಿಸೆಯಲ್ಲಿ ಪಟ್ಟಭದ್ರರು, ಸ್ವಯಂಘೋಷ ಚಕ್ರವರ್ತಿಗಳು ನಮ್ಮನ್ನು ಬಿಟ್ಟರೆ ಕನ್ನಡವಿಲ್ಲವೆಂದು ಅನ್ಯಭಾಷೆಯನ್ನು ಅನ್ಯ ಭಾಷಿಕರನ್ನೂ ಅನವಶ್ಯಕ ದೂಷಿಸುವುದು ಬಿಟ್ಟು ಈ ನಾಡಿನಲ್ಲಿ ಹುಟ್ಟಿ ನಾವೇನು ನಿಜವಾಗಿ ತೊಟ್ಟಿದ್ದೇವೆ. ಈಗಿನ – ಮುಂದಿನ ಯುವ ಪೀಳಿಗೆಗೆ ಏನು ಕೊಟ್ಟಿದ್ದೇವೆ ಮುಖ್ಯವಾಗಿ ಏನು ಮರೆತುಬಿಟ್ಟಿದ್ದೇವೆ ಎಂಬುದನ್ನು ಯೋಚಿಸಬೇಕಾಗಿದೆ ಎಂದರು.
ಕನ್ನಡ ಭಾಷೆ ಕೇವಲ ಭಾಷೆಯಾಗಿ ಮಾತ್ರ ಉಳಿಯುವುದಲ್ಲ ಅದು ನೀತಿಯಾಗಿ, ರೀತಿಯಾಗಿ, ಪದ್ಧತಿಯಾಗಿ, ಸಿದ್ಧತೆಯಾಗಿ ಹಾಗೂ ಬದ್ಧತೆಯಾಗಿ ಇಡೀ ಸಂಸ್ಕೃತಿಯನ್ನುಳಿಸಿ ಬೆಳೆಸುವ, ಹಿರಿಮೆ-ಗರಿಮೆಗಳ ಪರಿಚಯಿಸುವ ಸತ್ಯ ಸಾಕ್ಷಾತ್ಕಾರವಾಗಿಸುವ ಅದ್ಭುತ ಸೆಲೆ ಕಲೆ ನೆಲೆ ಸದಾ ಜೀವನ್ಮುಖಿ ಅಲೆಯಾಗಿಯೂ ಪ್ರವಾಹಿಸಬೇಕಾಗಿದೆ.
ಭಾಷೆ ನಡೆ ಮಾಲಿನ್ಯ, ನುಡಿ ಮಾಲಿನ್ಯದಿಂದ ಕಲಸುಮೇಲೊಗರ ಪ್ರಯೋಗವಾಗದೇ, ಮಡಿವಂತಿಕೆಯಿಂದ ಮುಳುಗದೇ, ಹೃದಯ ಶ್ರೀಮಂತಿಕೆಯಿಂದ ಮೊಳಗಬೇಕಾಗಿದೆ ಬೆಳಗಬೇಕಾಗಿದೆ. ಭಾಷೆಯು ಸಾಂಪ್ರದಾಯ, ಸಂಸ್ಕೃತಿಯಾಗಿ ಮತ್ತಷ್ಟು ಶ್ರೀಮಂತವಾಗಬೇಕೇ ವಿನಃ, ವಿಕೃತಿಯಿಂದ ನಿಜ ಆಕೃತಿಗೆ ಧಕ್ಕೆಯಾಗದಂತಿರಬೇಕು. ಆಚರಿಸುವ ಆಚರಣೆಗಳೂ ವಿವೇಚನೆಯೊಂದಿಗೆ ಅನುಕರಣೀಯ ಕ್ರಿಯೆಯಾಗಬೇಕು. ಭಾಷೆ ಎಂಬುದು ಆಷಾಢಭೂತಿ ಭಾಷಣವಾಗದೇ, ಸರ್ವಾಲಂಕೃತ ಭೂಷಣವಾಗಬೇಕು. ನುಡಿದರೆ ಮುತ್ತಿನ ಹಾರ, ನಡೆದರೆ ಸಂಸ್ಕೃತಿ ಸಾರ, ಮುಡಿದರೆ ಧನ್ಯತೆಯ ಭಾವ, ಹರಡಿದರೆ ಶ್ರೀಗಂಧದ ಸೌರಭವಾಗಿ ಈ ನೆಲದ ವಾಸಿಗರೆಲ್ಲರೂ ವ್ಯಕ್ತಿಗತ ಭೇದ ಬದಿಗಿಟ್ಟು ಅಹುದಹುದೆನ್ನಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ದುಶ್ಚಟಗಳಿಂದ ದೂರವಿರುವುದಾಗಿ ವಿದ್ಯಾರ್ಥಿಗಳಿಂದ ಪ್ರತಿಜ್ಞೆಯನ್ನು ಮಾಡಿಸಿದರು.
ಪ್ರಾಂಶುಪಾಲ ಪ್ರೊ.ಚಂದ್ರಾನಾಯಕ್, ಉಪನ್ಯಾಸಕರಾದ ಉಮೇಶ್‌ರೆಡ್ಡಿ, ಬಿ.ಕೆ.ರವಿ, ಕೆ.ಎನ್.ವೆಂಕಟಾಚಾರಿ, ರಾಮಚಂದ್ರಪ್ಪ, ಯತಿರಾಜುಲು ನಾಯ್ಡು, ಚಾಯಣ್ಣ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -