ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ನಿವೇಶನ ರಹಿತ ಫಲಾನುಭವಿಗಳ ಪಟ್ಟಿಗಳ ಸಿದ್ಧಪಡಿಸಿ ಗ್ರಾಮಸಭೆಗಳಲ್ಲಿ ಫಲಾನುಭವಿಗಳನ್ನು ಅನುಮೋದನೆ ನೀಡಿ ತಾಲ್ಲೂಕು ಪಂಚಾಯಿತಿಗೆ ಸಲ್ಲಿಸುವಂತೆ ಗ್ರಾಮ ಪಂಚಾಯಿತಿಗಳ ಪಿ.ಡಿ.ಓ.ಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಅವರು ಅಧಿಕಾರಿಗಳೊಂದಿಗೆ ಮಾತನಾಡಿದರು.
ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಗಳನ್ನು ಸರ್ವೆ ಮಾಡಿ ನಿವೇಶನಗಳಿಗೆ ಅಗತ್ಯವಾಗಿರುವ ಭೂಮಿಗಳನ್ನು ಗುರ್ತಿಸಬೇಕು. ಒಂದು ವೇಳೆ ಸರ್ಕಾರಿ ಭೂಮಿ ಲಭ್ಯವಾಗದಿದ್ದಲ್ಲಿ ಹಳ್ಳಿಗಳ ಸಮೀಪದಲ್ಲಿರುವ ಭೂಮಿಯನ್ನು ಸರ್ಕಾರ ನಿಗದಿಪಡಿಸಿರುವ ಧರಗಳಿಗೆ ಅನುಸಾರವಾಗಿ ನಿಯಮಾನುಸಾರವಾಗಿ ಖರೀದಿ ಮಾಡಿಕೊಂಡು ವಸತಿಗಳ ಉದ್ದೇಶಕ್ಕಾಗಿ ಭೂ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದು ಭೂ ಮಾಪನ ಇಲಾಖೆಗೆ ಸೂಚಿಸಿದರು.
ಈಗಾಗಲೇ ಫಲಾನುಭವಿಗಳ ಪಟ್ಟಿಗಳು ಸಿದ್ಧವಾಗಿದ್ದರೆ ಮತ್ತೊಂದು ಬಾರಿ ಮನೆ ಮನೆಗೆ ಹೋಗಿ ಗಣತಿ ಮಾಡಿಕೊಂಡು ನಿಜವಾದ ಫಲಾನುಭವಿಗಳನ್ನು ಗುರ್ತಿಸಿ ಪಟ್ಟಿ ಸಲ್ಲಿಸಬೇಕು ಎಂದರು.
ವಸತಿ ರಹಿತರಿಗೆ ವಸತಿ ಸೌಕರ್ಯವನ್ನು ಕಲ್ಪಿಸುವುದು ಹಾಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಕಡೆಗೆ ಎಲ್ಲಾ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಈ ಸಂದರ್ಭದಲ್ಲಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸತೀಶ್, ತನುಜಾರಘು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಹಾಜರಿದ್ದರು.
- Advertisement -
  
- Advertisement -
- Advertisement -







