ತಾಲ್ಲೂಕಿನ ವಿವಿದೆಡೆ ಎರಡು ದಿನಗಳಿಂದ ರಾತ್ರಿ ವೇಳೆ ಸುರಿದ ಬಿರುಗಾಳಿ, ಆಲಿಕಲ್ಲಿನ ಮಳೆಗೆ ದ್ರಾಕ್ಷಿ, ಮಾವು, ಹಿಪ್ಪುನೇರಳೆ ಮುಂತಾದ ಬೆಳೆಗಳು ಹಾಳಾಗಿದ್ದು, ರೈತರಿಗೆ ಅಪಾರ ನಷ್ಟವುಂಟಾಗಿದೆ. ತಾಲ್ಲೂಕಿನಾದ್ಯಂತ ಸುಮಾರು ೫೦ ವಿದ್ಯುತ್ ಕಂಬಗಳು ಉರುಳಿದ್ದು ವಿದ್ಯುತ್ ವ್ಯತ್ಯಯವೂ ಉಂಟಾಗಿದೆ.
ಜಂಗಮಕೋಟೆ ಹೋಬಳಿಯ ಬಳುವನಹಳ್ಳಿ, ಜೆ.ವೆಂಕಟಾಪುರ, ಮಿತ್ತನಹಳ್ಳಿ, ಹೊಸಪೇಟೆಯ ಸುತ್ತಮುತ್ತ ಆಲಿಕಲ್ಲಿನ ಮಳೆಯಿಂದಾಗಿ ಹಿಪ್ಪುನೇರಳೆ ಬೆಳೆ ಸಂಪೂರ್ಣ ನಾಶವಾಗಿದೆ. ಮಾವಿನ ಫಸಲು ಸಹ ಸಾಕಷ್ಟು ಹಾನಿಯಾಗಿದೆ. ತರಕಾರಿ, ಹೂ ಹಣ್ಣಿನ ಬೆಳೆಗಳಿಗೂ ತೊಂದರೆಯಾಗಿದೆ.
ತಾಲ್ಲೂಕಿನಲ್ಲಿ ಮಳೆಯ ಹಾನಿಯನ್ನು ಪರಿಶೀಲಿಸಲು ರೇಷ್ಮೆ, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಮಳೆಯ ಪರಿಣಾಮದಿಂದಾದ ನಷ್ಟದ ಅಂದಾಜನ್ನು ಪಟ್ಟಿ ಮಾಡುತ್ತಿದ್ದಾರೆ. ವಿದ್ಯುತ್ ಇಲಾಖೆಯವರು ಉರುಳಿ ಬಿದ್ದ ಮರಗಳನ್ನು ಪಕ್ಕಕ್ಕೆ ಸರಿಸಿ ಬಿದ್ದು ಹೋಗಿರುವ ಕಂಬಗಳನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
- Advertisement -
- Advertisement -
- Advertisement -