20.6 C
Sidlaghatta
Thursday, July 31, 2025

ಮದ್ಯಪಾನ ಇಡೀ ಕುಟುಂಬದ ಸುಖ ನೆಮ್ಮದಿ ಹಾಳು ಮಾಡುತ್ತದೆ

- Advertisement -
- Advertisement -

ದುಡಿಮೆಯ ಬಹುಪಾಲು ಹಣವನ್ನು ಮದ್ಯಪಾನದಂತಹ ದುಶ್ಚಟಗಳಿಗೆ ವಿನಿಯೋಗಿಸಿ ಕುಟುಂಬಗಳು ಆರ್ಥಿಕ ಹಿನ್ನೆಡೆಯತ್ತ ಸಾಗುತ್ತಿವೆ. ಮದ್ಯಪಾನದ ಪಿಡುಗಿನಿಂದ ನಾಶವಾಗುತ್ತಿರುವ ಕುಟುಂಬಗಳನ್ನು ರಕ್ಷಿಸಿ ಆರ್ಥಿಕವಾಗಿ ಮುಂದೆ ತರಲು ಮದ್ಯವರ್ಜಿನ ಶಿಬಿರವನ್ನು ಜಿಲ್ಲೆಯಲ್ಲಿಯೇ ಪ್ರಥಮವಾಗಿ ಶಿಡ್ಲಘಟ್ಟದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಶ್ರೀ ಪಟಾಲಮ್ಮ ಮತ್ತು ವೀರ ಸೊಣ್ಣಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿರುವ ೧೧೦೬ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯಪಾನ ಎಂಬುವುದು ತನ್ನನ್ನು ಹಾಳು ಮಾಡುವುದಲ್ಲದೆ ಜೊತೆಗೆ ಇಡೀ ಕುಟುಂಬದ ಸುಖ ನೆಮ್ಮದಿ ಹಾಳು ಮಾಡುತ್ತದೆ. ಆದ್ದರಿಂದ ಎಲ್ಲಾ ದುಶ್ಚಟಗಳಿಂದ ದೂರ ಉಳಿದರೆ ಮಾತ್ರ ನೆಮ್ಮದಿ ಬದುಕು ಸಾಧ್ಯ. ದುಶ್ಚಟಗಳಿಂದ ಮನುಷ್ಯ ತನ್ನ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದು, ಸಮಾಜದಲ್ಲಿ ತನ್ನ ವ್ಯಕ್ತಿತ್ವ ಕಳೆದುಕೊಳ್ಳುತ್ತಾನೆ. ಯುವಕರು ಇಂದು ದುಶ್ಚಟಗಳ ದಾಸರಾಗುತ್ತಿರುವುದು ವಿಪರ್ಯಾಸ ಎಂದರು.
ಹಾಪ್ ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ನಮ್ಮ ತಾಲ್ಲೂಕಿನಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸಿರುವುದರಿಂದ ಈ ಭಾಗದ ಬಡ ಜನರಿಗೆ ಮದ್ಯಪಾನ ಬಿಡಿಸುವ ಮೂಲಕ ಅವರ ಬದುಕಿಗೆ ಆಶಾಕಿರಣವಾಗಿದೆ. ಶಿಬಿರದಲ್ಲಿರುವ ಎಲ್ಲ ಶಿಬಿರಾರ್ಥಿಗಳು ಇದರಿಂದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಮದ್ಯವರ್ಜನ ಶಿಬಿರ ಏಳು ದಿನಗಳ ಕಾಲ ನಡೆಯಲಿದ್ದು ಇದರಲ್ಲಿ ಶಿಬಿರಾರ್ಥಿಗಳಿಗೆ ಬೋಧನೆ ಜೊತೆಗೆ ಆಟ, ಪಾಠ, ಯೋಗ ಇತ್ಯಾದಿ ಇರುತ್ತದೆ. ಮಾನವನಾದ ಮೇಲೆ ತಪ್ಪು ಮಾಡುವುದು ಸಹಜ, ತಿದ್ದಿ ನಡೆಯುವವನೇ ಮನುಜ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನಾಧಿಕಾರಿ ಮೋಹನ್ ಮಾತನಾಡಿ, ಈ ಶಿಬಿರ ಒಂದು ವಾರ ನಡೆಯುತ್ತಿದ್ದು ಶಿಬಿರಾರ್ಥಿಗಳನ್ನು ಅವರ ಸ್ವಂತ ಇಚ್ಛೆಯ ಮೇಲೆ ಅಥವಾ ಅವರ ಕುಟುಂಬದವರ ಒಪ್ಪಿಗೆ ಪಡೆದು ಶಿಬಿರಕ್ಕೆ ಸೇರಿಸಿಕೊಂಡು ಪ್ರತಿ ದಿನ ಬೆಳಗ್ಗೆ 5 ರಿಂದ ರಾತ್ರಿ 10 ಗಂಟೆಯ ತನಕ ಯೋಗ, ಮಾರ್ಗದರ್ಶನ, ವೈದ್ಯರಿಂದ ತಪಾಸಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ.ಏಳು ದಿನಗಳ ಕಾಲ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಶಿಬಿರದಲ್ಲೇ ಮಾಡಲಾಗಿದೆ. ಶಿಬಿರದಲ್ಲಿ ಮದ್ಯಪಾನದಿಂದಾಗುವ ದುಷ್ಟಪರಿಣಾಮಗಳು ಹಾಗೂ ಮದ್ಯಪಾನ ಬಿಡಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿ ಮದ್ಯಪಾನ ಬಿಡುವಂತೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮದ್ಯವ್ಯಸನಿಗಳು ಸಂಯಮದಿಂದ ಇದ್ದು, ಕಾರ್ಯಕ್ರಮ ಮುಗಿದ ನಂತರ ಮದ್ಯಪಾನ ಬಿಟ್ಟು ಸಂತೋಷವಾಗಿ ಬಾಳಿ ಎಂದು ಹೇಳಿದರು.
ಮದ್ಯವರ್ದನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಎ.ಎಂ. ತ್ಯಾಗರಾಜ್, ಹಂಡಿಗನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಿಯಪ್ಪ, ಶ್ರೀನಿವಾಸಮೂರ್ತಿ, ಎಚ್.ಎಂ.ಮುನಿರಾಜು, ಪಟಾಲಮ್ಮ ವೀರಸೊಣ್ಣಮ್ಮ ದೇವಾಲಯ ಸಮಿತಿಯ ಕೋಶಾಧಿಕಾರಿ ನಾಗರಾಜಪ್ಪ, ಯೋಜನಾಧಿಕಾರಿ ದಿನೇಶ್, ಶಿಬಿರಾಧಿಕಾರಿ ರಾಘವೇಂದ್ರ, ಮಾಣಿಕ್ಯಮ್ಮ, ಮೇಲ್ವಿಚಾರಕರಾದ ಶಶಿಕುಮಾರ್, ಮಮತಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!