21.1 C
Sidlaghatta
Thursday, July 31, 2025

ಮಾರ್ಚ್ 3 ರಂದು ಬೃಹತ್ ಪ್ರತಿಭಟನಾ ಟ್ರಾಕ್ಟರ್ ರ್ಯಾಲಿ

- Advertisement -
- Advertisement -

ಬೆಂಗಳೂರಿನ ಅಭಿವೃದ್ಧಿ ಕೆಲಸಗಳನ್ನು ಸಮರೋಪಾದಿಯಲ್ಲಿ ನಡೆಸುವ ಜನಪ್ರತಿನಿಧಿಗಳು ಗ್ರಾಮೀಣ ಭಾಗಗಳನ್ನು ಕಡೆಗಣಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಹೋರಾಟಗಳು ನಡೆಸಿದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
158 ದಿನಗಳ ನಿರಂತರ ದರಣಿ ಸತ್ಯಾಗ್ರಹ ಮಾಡಿದರೂ ರೈತರ ಸಮಸ್ಯೆಗೆ ಸ್ಪಂದಿಸದ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಸಾವಿರಾರು ಟ್ರಾಕ್ಟರ್ ಗಳ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ಶಾಶ್ವತ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಿದ್ಧತೆ ನಡೆಸಿದೆ. ಈ ಸಂಬಂಧವಾಗಿ ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲಕರವಾಗಿ ಶೀಘ್ರವಾಗಿ ಯೋಜನೆಗಳನ್ನು ರೂಪಿಸುವ ಸರ್ಕಾರಗಳು, ಬಯಲು ಸೀಮೆಯ ಜನರ ನೋವು ಹಾಗೂ ಕಷ್ಟಕ್ಕೆ ಇದುವರೆಗೂ ಸ್ಪಂದಿಸಿಲ್ಲ. ನೀರಿಗಾಗಿ ಹೋರಾಟವನ್ನು ನಡೆಸುತ್ತಿದ್ದರೂ ಹೋರಾಟಗಾರರನ್ನು ಕಡೆಗಣಿಸುವ ಮೂಲಕ ಬಯಲು ಸೀಮೆಯ ಜನರ ಕೋಪಕ್ಕೆ ಸರ್ಕಾರ ಗುರಿಯಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸದ ಸರ್ಕಾರಕ್ಕೆ ಬೃಹತ್ ಪ್ರತಿಭಟನಾ ಟ್ರಾಕ್ಟರ್ ರ್ಯಾಲಿಯೊಂದಿಗೆ ವಿಧಾನಸೌಧವನ್ನು ಮಾರ್ಚ್ 3 ರಂದು ಮುತ್ತಿಗೆ ಹಾಕಲಿದ್ದೇವೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ತಲಾ ಒಂದೊಂದು ಟ್ರಾಕ್ಟರ್ ಕಳಿಸುತ್ತಿದ್ದು, ಪ್ರತಿಯೊಂದು ಗ್ರಾಮದಲ್ಲೂ ಟ್ರಾಕ್ಟರ್ ಉಳ್ಳ ರೈತರು ಹಾಗೂ ಗ್ರಾಮಸ್ಥರು ಈ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕೋರಿದರು.
ಎಲ್ಲಾ ಜನಪರ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಎಲ್ಲ ಪಕ್ಷದವರೂ ಭಾಗವಹಿಸುತ್ತಿದ್ದಾರೆ. ನೀರಿಗೆ ಬೇಧವಿಲ್ಲದಂತೆ ನೀರಿನ ಹೋರಾಟಕ್ಕೂ ಬೇಧವಿಲ್ಲ. ಜನ ಜಾನುವಾರುಗಳು ನೀರಿಗಾಗಿ ತಪಿಸುತ್ತಿರುವಾಗ ಎಲ್ಲರೂ ಒಗ್ಗೂಡಿ ಹೋರಾಡಬೇಕಾದದ್ದು ಅನಿವಾರ್ಯವಾಗಿದೆ. ನಮ್ಮನ್ನಾಳುವವರಿಗೆ ನಮ್ಮ ನೋವು, ಕಷ್ಟ, ತಾಪತ್ರಯ, ಅಗತ್ಯವನ್ನು ಮನಗಾಣಿಸಬೇಕಿದೆ. ನೀರು ನಮಗೆ ಅತ್ಯಗತ್ಯವಾಗಿದ್ದು, ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ನುಡಿದರು.
ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಎಸ್.ಎಂ.ನಾರಾಯಣಸ್ವಾಮಿ, ಯಲುವಳ್ಳಿ ಸೊಣ್ಣೇಗೌಡ, ಯುವಶಕ್ತಿ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ, ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಅಬ್ಲೂಡು ಆರ್.ದೇವರಾಜ್, ಮಂಜುನಾಥ್, ವೇಣುಗೋಪಾಲ್, ನಂಜಪ್ಪ, ತ್ಯಾಗರಾಜ್, ಶಿಕ್ಷಕರ ಸಂಘದ ಶ್ರೀರಾಮಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!