ಕೊಳವೆ ಬಾವಿಯಿದ್ದರೂ ನೀರಿನ ಸೌಲಭ್ಯವಿಲ್ಲ, ನಾಯಿಗಳ ಕಾಟ, ಮಳೆ ಬಂದರೆ ಓಡಾಡಲು ಅಸಾಧ್ಯ, ಕಳೆಗಿಡಗಳು ಎಲ್ಲೆಂದರಲ್ಲಿ ಬೆಳೆದಿರುವುದರಿಂದ ಹಾವುಗಳ ಕಾಟ… ಇದು ಪೊಲೀಸ್ ಕ್ವಾಟರ್ಸ್ ದುಃಸ್ಥಿತಿ. ಊರಿನ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ಪೊಲೀಸರು ತಮ್ಮ ಮನೆಗಳಿರುವ ಪ್ರದೇಶವನ್ನೇ ಸ್ವಚ್ಛವಾಗಿಟ್ಟುಕೊಳ್ಳದಷ್ಟು ಅಸಹಾಯಕರಾಗಿದ್ದಾರೆಯೇ ಎಂದು ನಾಗರಿಕ ಸಮುದಾಯ ಪ್ರಶ್ನಿಸುವಂತಾಗಿದೆ.
ತಾಲ್ಲೂಕಿನಲ್ಲಿ ಒಬ್ಬರು ಸರ್ಕಲ್ ಇನ್‌ಸ್ಪೆಕ್ಟರ್, ಮೂವರು ಸಬ್ ಇನ್‌ಸ್ಪೆಕ್ಟರ್, ಹತ್ತು್ತ ಮಂದಿ ಎಎಸ್‌ಐ, 25 ಮಂದಿ ಎಚ್‌ಸಿಗಳು, 42 ಮಂದಿ ಪಿಸಿಗಳಿದ್ದಾರೆ. ಇವರಿಗೆಂದೇ ನಿರ್ಮಿಸಲಾಗಿರುವ ನಾಲ್ಕು ಅಪಾರ್ಟ್‌ಮೆಂಟ್‌ಗಳಲ್ಲಿ 100 ಮನೆಗಳಿವೆ. ಈ ಪೈಕಿ 50 ಮನೆಗಳಲ್ಲಿ ಮಾತ್ರ ವಿವಿಧ ಪೊಲೀಸ್ ಕುಟುಂಬಗಳು ವಾಸವಿವೆ. ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಉಳಿದವರು ಬೇರೆಡೆ ವಾಸಿಸುತ್ತಿದ್ದಾರೆ.
ಕ್ವಾಟರ್ಸ್ ಆವರಣದಲ್ಲಿರುವ ನಲ್ಲಿಗೆ ನೀರು ಸರಬರಾಜಾಗುತ್ತಿಲ್ಲ. ಟ್ಯಾಂಕರ್ ನೀರನ್ನು ಖರೀದಿಸಿ ಕಾಲ ತಳ್ಳುತ್ತಿದ್ದಾರೆ. ಶಿಥಿಲವಾಗಿರುವ ಕಾಂಪೌಂಡ್ ಹಲವೆಡೆ ಬಿದ್ದು ಹೋಗಿದೆ. ಪಾರ್ಥೇನಿಯಂ ಹಾಗೂ ಕಳೆಗಿಡಗಳು ಸಾಕಷ್ಟು ಬೆಳೆದಿರುವುದರಿಂದ ಹಾವುಗಳೂ ಓಡಾಡುತ್ತಿವೆ. ಮಕ್ಕಳು ಆಡುವಾಗ ಬೀದಿನಾಯಿಗಳ ಕಾಟ ಇದೆ. ಈ ಪ್ರದೇಶದಲ್ಲಿರುವ ಟ್ರಾನ್ಸ್‌ಫರ್ಮರ್ ಕಂಬಕ್ಕೆ ಗಿಡಬಳ್ಳಿಗಳು ಹಬ್ಬಿಬಿಟ್ಟಿದೆ. ಇದರಿಂದಾಗಿ ಮಳೆ ಬಂದಾಗ ಶಾರ್ಟ್ ಸರ್ಕೀಟ್ ಆಗುವ ಅಪಾಯವೂ ಇದೆ.
ಮಣ್ಣಿನ ರಸ್ತೆಯು ಮಳೆ ಬಂದಾಗ ನಡೆದಾಡಲು ಅಸಾಧ್ಯವಾಗುತ್ತದೆ. ಸಂಜೆಯಾದರೆ ಸೊಳ್ಳೆಗಳ ಕಾಟ. ಮೂಲ ಸೌಕರ್ಯ ಕೊರತೆಯಿಂದ ನಾವು ಇಲ್ಲಿ ಕಷ್ಟಪಡುತ್ತಿದ್ದೇವೆ. ನೀರಿನ ಸೌಲಭ್ಯ ಒದಗಿಸಿಕೊಡಬೇಕು. ಕಾಂಪೌಂಡ್ ಒಳಗಿನ ಕಳೆಗಿಡ ನಿರ್ಮೂಲನೆಗೆ ಮತ್ತು ಬೀದಿ ದೀಪಕ್ಕೆ ನಗರಸಭೆ ಗಮನ ಹರಿಸಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
- Advertisement -
- Advertisement -
- Advertisement -