ಕೇಂದ್ರ ಸರ್ಕಾರ, ಮತ್ತು ಕೊಲಿಜಿಯಂನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರ ರಾಜೀನಾಮೆಯಿಂದ ಸಾಬೀತಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ. ಚಂದ್ರಶೇಖರಗೌಡ ಹೇಳಿದರು.
ನ್ಯಾಯಮೂರ್ತಿ ಜಯಂತ್ ಪಟೇಲ್ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಸಿವಿಲ್ ನ್ಯಾಯಾಲಯದಲ್ಲಿ ವಕೀಲರು ಒಂದು ದಿನದ ಮಟ್ಟಿಗೆ ಕಲಾಪಗಳಿಗೆ ಗೈರುಹಾಜರಾಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿ ಜಯಂತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದ್ದು ಪ್ರಾಮಾಣಿಕ ನ್ಯಾಯಮೂರ್ತಿಗಳ ಮುಕ್ತ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಿದೆ.
ವಕೀಲರ ಸಂಘದ ಮಾಜಿ ಅಧ್ಯಕ್ಷ ಪಾಪಿರೆಡ್ಡಿ ಮಾತನಾಡಿ, ರಾಜೀನಾಮೆ ಪತ್ರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕರ್ನಾಟಕ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಸೋಮವಾರ ರವಾನಿಸಿದ್ದರು. ಇತ್ತೀಚೆಗೆ ನ್ಯಾ. ಜಯಂತ್ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಿ ಆದೇಶಿಸಲಾಗಿತ್ತು.
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರ ನಂತರ ಎರಡನೇ ಸ್ಥಾನದಲ್ಲಿರುವ ಜಯಂತ್ ಪಟೇಲ್, ೨೦೧೮ರ ಆಗಸ್ಟ್ ೩ರಂದು ನಿವೃತ್ತಿ ಆಗಬೇಕಿತ್ತು. ೨೦೧೬ರ ಫೆಬ್ರುವರಿ ೧೩ರಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕೊಲಿಜಿಯಂನಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಮ ಮಾಡುತ್ತದೆ. ನ್ಯಾಯಮೂರ್ತಿಗಳು ರಾಜೀನಾಮೆ ನೀಡಿದ್ದರು, ಕನಿಷ್ಠ ಸೌಜನ್ಯಕ್ಕಾದರು ಸಂಪರ್ಕ ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಎಂ.ಬಿ.ಲೊಕೇಶ್, ಜಂಟಿ ಕಾರ್ಯದರ್ಶಿ ವಿ.ಎನ್.ನಾಗೇಂದ್ರಬಾಬು, ಖಜಾಂಚಿ ಜಿ.ಎನ್.ನಾಗರಾಜು, ಬೈರಾರೆಡ್ಡಿ, ಭಾಸ್ಕರ್, ಕೃಷ್ಣಮೂರ್ತಿ, ಕೆಂಪೇಗೌಡ, ಕೆ.ಎಂ.ನಾಗಮಣಿ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -