ನಾಡಿನ ಯುವಜನರಿಗೆ ಉದ್ಯೋಗ ನೀಡುವುದು ಸರ್ಕಾರಕ್ಕೆ ಸವಾಲಾಗಿದೆ. ಈಗಿನ ಯುಗದಲ್ಲಿ ಕೇವಲ ವಿದ್ಯೆ ಕಲಿತರೆ ಸಾಲದು ಕೌಶಲ್ಯವನ್ನು ಹೊಂದಬೇಕೆಂದು ಯುವ ಜನರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್ ತಿಳಿಸಿದರು.
ನಗರದ ಬಸ್‌ನಿಲ್ದಾಣದ ಎದುರಿಗಿರುವ ಬಿ.ಆರ್.ಕಾಂಪ್ಲೆಕ್ಸ್‌ನಲ್ಲಿ ಸೌಂಧರ್ಯ ಗ್ರಾಮೀಣ ಹಾಗೂ ಪಟ್ಟಣ ಅಭಿವೃದ್ಧಿ ಸಂಸ್ಥೆಯಿಂದ ರಾಜೀವ್‌ಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ನಿರುದ್ಯೋಗಿ ಟೈಲರಿಂಗ್ ತರಬೇತಿ ಪಡೆದ ಯುವತಿಯರಿಗೆ ಗುರುವಾರ ಪ್ರಮಾಣ ಪತ್ರ ಮತ್ತು ಶಿಬಿರದ ಭತ್ಯೆಯ ಚೆಕ್ ವಿತರಿಸಿ ಅವರು ಮಾತನಾಡಿದರು, ನಲವತ್ತೈದು ದಿನಗಳ ಕಾಲ ಯುವತಿಯರು ಟೈಲರಿಂಗ್ ತರಬೇತಿಯೊಂದಿಗೆ ವಿವಿಧ ತರಬೇತಿಗಳನ್ನು ಪಡೆದು ಈ ದಿನ 4,500 ರೂಗಳ ಚೆಕ್ ಪಡೆಯುತ್ತಿರುವಿರಿ. ಈ ಹಣವನ್ನು ಪೋಲು ಮಾಡದೆ ಅದಕ್ಕೆ ಇನ್ನು ಸ್ವಲ್ಪ ಹಣವನ್ನು ಸೇರಿಸಿ ಒಂದು ಹೊಲಿಗೆ ಯಂತ್ರವನ್ನು ಕೊಳ್ಳಿ. ಸ್ವತಂತ್ರವಾಗಿ ಬದುಕುವುದನ್ನು ರೂಢಿಸಿಕೊಳ್ಳಿ. ಆರ್ಥಿಕವಾಗಿ ಸ್ವಾವಲಂಬಿಗಳಾದಲ್ಲಿ ನಿಮ್ಮಲ್ಲಿ ತಾನಾಗಿಗೇ ಆತ್ಮಸ್ಥೈರ್ಯ ಮತ್ತು ಆತ್ಮಗೌರವ ಮೂಡುತ್ತದೆ. ನೀವು ಸರ್ಕಾರದ ನೆರವಿನಿಂದ ತರಬೇತಿಯನ್ನು ಪಡೆದ ಕಾರಣ ಸರ್ಕಾರದ ರಾಯಭಾರಿಗಳಾಗಿ ನಿಮ್ಮ ಸುತ್ತಮುತ್ತ ವೈಯಕ್ತಿಯ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಪ್ರೇರಣೆ ನೀಡಿ. ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸಲು ನಿಮ್ಮ ಸೇವೆಯೂ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ತರಬೇತಿಯನ್ನು ಪಡೆದ ಎರಡನೇ ತಂಡಕ್ಕೆ ಪ್ರಮಾಣ ಪತ್ರ ಮತ್ತು ಶಿಬಿರದ ಭತ್ಯೆಯ ಚೆಕ್ ವಿತರಿಸಿ, ಮೂರನೇ ತಂಡದ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದ ಅನುಭವಗಳನ್ನು ತರಬೇತಿ ಪಡೆದ ಯುವತಿಯರು ಹಂಚಿಕೊಂಡರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಬ್ಯಾಂಕ್ ಸಂಪರ್ಕಾಧಿಕಾರಿ ರಾಮಸ್ವಾಮಿ, ಸೌಂಧರ್ಯ ಗ್ರಾಮೀಣ ಹಾಗೂ ಪಟ್ಟಣ ಅಭಿವೃದ್ಧಿ ಸಂಸ್ಥೆಯ ವೆಂಕಟರೋಣಪ್ಪ, ಭಕ್ತರಹಳ್ಳಿ ಮುನೇಗೌಡ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -