ಶ್ರೀರಾಮನವಮಿಯಂದು ತಾಲ್ಲೂಕಿನ ವಿವಿಧ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳ ಬಳಿ ಉಟ್ಲು ನಡೆಯುತ್ತದೆ. ಕ್ಷೀರ ಉಟ್ಲು ಮತ್ತು ಮನರಂಜನಾ ಉಟ್ಲು ಆಚರಿಸಲಾಗುತ್ತದೆ. ಹಾಲನ್ನು ಪುಟ್ಟ ಪುಟ್ಟ ಮಡಿಕೆಗಳಲ್ಲಿ ಕಟ್ಟಿ ಪೂಜಿಸಿ ಒಡೆಯುವುದು ಕ್ಷೀರ ಉಟ್ಲು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆಯನ್ನು ತಿರುಗಿಸುತ್ತಾ ಅವಕ್ಕೆ ಕಟ್ಟಿರುವ ತೆಂಗಿನ ಕಾಯಿಗಳನ್ನು ಉದ್ದುದ್ದದ ಕೋಲು ಹಿಡಿದು ಒಡೆಯುವುದು ಮನರಂಜನಾ ಉಟ್ಲು. ಈ ತಿರುಗುವ ಉಟ್ಲುವಿನ ಕಾರಣ ಕುಂಬಾರಿಕೆಯ ಚಕ್ರವೂ ತಿರುಗತೊಡಗಿದೆ.
ಉಟ್ಲು ಪರಿಷೆಯ ಒಂದು ಭಾಗವಾದ ಕ್ಷೀರ ಉಟ್ಲುವಿಗೆ ಬೇಕಾದ ಪುಟ್ಟ ಪುಟ್ಟ ಮಣ್ಣಿನ ಮಡಿಕೆಗಳಿಂದಾಗಿ ತಾಲ್ಲೂಕಿನಲ್ಲಿ ಕುಂಬಾರಿಕೆ ಮಾಡುವವರಿಗೆ ಬೇಡಿಕೆ ಕುದುರಿದೆ. ತಾಲ್ಲೂಕಿನ ಗೊಲ್ಲಹಳ್ಳಿಯ ವೃದ್ಧ ಮುನಿಬಾಲಪ್ಪ ಹಾಲುಟ್ಲುವಿಗೆ ಬಳಸುವ ಪುಟ್ಟ ಪುಟ್ಟ ಮಡಿಕೆಗಳ ತಯಾರಿಸುವುದರಲ್ಲಿ ನಿರತರಾಗಿದ್ದಾರೆ.
ಕುಂಬಾರಿಕೆ ತಾಲ್ಲೂಕಿನಲ್ಲಿ ವಿರಳವಾಗುತ್ತಿದೆ. ಉತ್ತಮ ಗುಣಮಟ್ಟದ ಮಣ್ಣು, ಮಾರುಕಟ್ಟೆಯಲ್ಲಿ ಕುಸಿದ ಬೇಡಿಕೆ, ಹೊಸ ತಲೆಮಾರಿಗೆ ಬೇಡವಾದ ವೃತ್ತಿ ಮುಂತಾದ ಕಾರಣಗಳಿಂದ ಕೆಲವೇ ಕೆಲವು ಗ್ರಾಮಗಳಲ್ಲಿ ಕುಂಬಾರಿಕೆಯನ್ನು ನಂಬಿದವರು ಕೆಲವರು ಮಾತ್ರ ತಾಲ್ಲೂಕಿನಲ್ಲಿ ಉಳಿದಿದ್ದಾರೆ.
‘ಬೇಡಿಕೆ ಬಂದಾಗ ಕೆಲಸ ಇಲ್ಲದಿದ್ದರೆ ಕೆಲಸವಿಲ್ಲ. ಇರುವ ಒಬ್ಬ ಮಗ ಕೆಲಸವನ್ನು ಅರಸಿ ಬೆಂಗಳೂರು ಸೇರಿದ್ದಾನೆ. ಚಿಕ್ಕವನಾಗಿದ್ದಾಗ ಪ್ರಾರಂಭಿಸಿದ ಮಣ್ಣಿನೊಂದಿಗಿನ ಬದುಕು ಹಾಗೇಯೇ ಸಾಗಿದೆ. ಈಗ ವಯಸ್ಸಾಗಿದೆ ಬೇರೇನೂ ಮಾಡುವಂತಿಲ್ಲ. ಗುಣಮಟ್ಟದ ಮಣ್ಣು ಸಿಗುವುದು ಕಷ್ಟ. ನಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತಿಲ್ಲ. ಆದರೂ ಚಕ್ರ ತಿರುಗಿಸದಿದ್ದರೆ ನಮ್ಮ ಬದುಕಿನ ಚಕ್ರ ಮುಂದುವರೆಯದು’ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ ಮುನಿಬಾಲಪ್ಪ.
‘ಹೊಲ್ಲಹಳ್ಳಿ ಕೆರೆ, ಕುಂದಲಗುರ್ಕಿ ಕೆರೆ ಮುಂತಾದೆಡೆಯಿಂದ ಮಣ್ಣನ್ನು ತರಬೇಕು. ಒಂದೊಂದು ರೀತಿಯ ಮಡಿಕೆಗೆ ಒಂದೊಂದು ರೀತಿಯ ಮಣ್ಣಿರಬೇಕು. ಮೊದಲಾದರೆ ಅಡುಗೆಯನ್ನು ಮಡಿಕೆಯಲ್ಲೇ ಮಾಡುತ್ತಿದ್ದರು. ವಿಶೇಷವಾಗಿ ಮಾಂಸದ ಅಡುಗೆಯನ್ನು ಮಡಿಕೆಯಲ್ಲಿ ಮಾಡಿದರೆ ಅದರ ರುಚಿ ಹೆಚ್ಚು ಎಂಬುದು ಹಳಬರ ಅನುಭವದ ನುಡಿ. ಈಗ ಮಡಿಕೆಯಲ್ಲಿ ಅಡುಗೆ ಮಾಡುವವರು ವಿರಳ. ಕೇವಲ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಇಡಲು ಬಳಸುತ್ತಾರೆ. ತಂಪುಪೆಟ್ಟಿಗೆಯಿಂದಾಗಿ ನೀರನ್ನು ಇಡುವವರೂ ಕಡಿಮೆಯಾಗುತ್ತಿದ್ದಾರೆ. ರಾಮನವಮಿಯ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧೆಡೆ ಆಚರಿಸುವ ಉಟ್ಲು ಪರಿಷೆಯ ನಿಮಿತ್ತ ಪುಟ್ಟ ಮಡಿಕೆಗಳನ್ನು ಮಾಡುವ ಮೂಲಕ ಕುಂಬಾರಿಕೆಯ ಚಕ್ರ ತಿರುತ್ತಿದೆ’ ಎಂದು ಅವರು ತಿಳಿಸಿದರು.
- Advertisement -
- Advertisement -
- Advertisement -