ಗಂಡು ಮತ್ತು ಹೆಣ್ಣೆಂಬ ಬೇಧಭಾವವಿಲ್ಲದೇ ಸರ್ವರಿಗೂ ೫ರಿಂದ ೧೪ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ನೀಡಲೇ ಬೇಕಾದ ಅಗತ್ಯಿವಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗೋಪಾಲ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ, ಜಿಲ್ಲಾಪಂಚಾಯತ್, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಣ್ಣು ಮತ್ತು ಗಂಡೆಂಬ ಬೇಧಭಾವ ಕೂಡದು. ಸಮಾಜದ ಅಭಿವೃದ್ಧಿಯಲ್ಲಿ ಇಬ್ಬರಿಗೂ ಸಮಾನವಾದ ಪಾತ್ರವಿದೆ. ಪೋಷಕರು ಮಕ್ಕಳಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ತಪ್ಪದೇ ಒದಗಿಸಬೇಕು. ಬಾಲಕಾರ್ಮಿಕ ಪದ್ಧತಿ, ಹೆಣ್ಣುಭ್ರೂಣ ಹತ್ಯೆ, ಅರ್ಹವಯಸ್ಸಿನ ಮಕ್ಕಳನ್ನು ಶಾಲಾ ಶಿಕ್ಷಣದಿಮದ ವಂಚಿತಗೊಳಿಸುವಂತಹ ಘಟನೆಗಳು ನಿಲ್ಲಬೇಕು ಎಂದು ಅವರು ವಿವರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ರಾಮೇಗೌಡ ಮಾತನಾಡಿ, ಮಕ್ಕಳಿಗೆ ಬದುಕುವ, ಭಾಗವಹಿಸುವ, ಅಭಿವ್ಯಕ್ತಿಪಡಿಸುವ ಹಕ್ಕುಗಳಿದ್ದು, ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳು ತಮಗೆ ಒದಗಿಬಂದ ಸನ್ನಿವೇಶಗಳನ್ನು ಎದುರಿಸಲು ಅಗತ್ಯವಾದಾಗ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ರಘುನಾಥ್ ಮಾತನಾಡಿ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಣ ಪಡೆಯುವಲ್ಲಿ ಒದಗಬಹುದಾದ ಎಲ್ಲಾ ಸಮಸ್ಯೆಗಳನ್ನೂ ಆದ್ಯತೆಮೇಲೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಜಂಗಮಕೋಟೆ ಸಿಆರ್‌ಪಿ ಸುಂದರಾಚಾರಿ ಮಾತನಾಡಿ, ಮಕ್ಕಳು ಸಾಲೆಯಿಂದ ಹೊರಗುಳಿಯದಂತೆ ಸರ್ಕಾರವು ಅನೇಕ ಸವಲತ್ತುಗಳನ್ನು ಒದಗಿಸಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಮತ್ತು ಗುಣಾತ್ಮಕ ಶಿಕ್ಷಣ ಪಡೆಯಲು ಪ್ರಯತ್ನಿಸಬೇಕು ಎಂದರು.
ಶಾಲಾ ಮಕ್ಕಳು ಶಾಲೆಯ ತರಗತಿ ಕೊಠಡಿ ರಿಪೇರಿ, ಕುಡಿಯುವ ನೀರಿನ ಸಮಸ್ಯೆ, ಆಟದ ಮೈದಾನದ ಕುರಿತು ಪ್ರಶ್ನೆಗಳನ್ನು ಕೇಳಿ ಮನವಿ ಸಲ್ಲಿಸಿದರು.
ಗ್ರಾಮಪಂಚಾಯಿತಿ ಉಪಾಧ್ಯಕ್ಷ ಚಂದ್ರೇಗೌಡ, ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ, ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ವೆಂಕಟಾಪುರ ಕೆ.ಗೀತಾ, ಮಿತ್ತನಹಳ್ಳಿ ಚಂದ್ರಶೇಖರ್, ಬಳುವನಹಳ್ಳಿ ಪದ್ಮಾ, ಭೈರಸಂದ್ರ ವಿರೂಪಾಕ್ಷ ಮಾತನಾಡಿದರು. ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಎಸ್.ಡಿ.ದೇವರಾಜು, ಭಾಗ್ಯಮ್ಮ ಅರುಣ್‌ಕುಮಾರ್, ಷಣ್ಮುಗ, ಮಿತ್ತನಹಳ್ಳಿ ಹರೀಶ್, ಭೈರಸಂದ್ರ ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷ ಆರ್.ನಾಗೇಶ್, ಪಾಪರಾಜು, ಸದಸ್ಯ ಎಸ್.ಎಂ.ಶಂಕರಪ್ಪ, ಎನ್.ಪಿ.ನಾಗರಾಜಪ್ಪ, ಚಂದ್ರಪ್ಪ, ಗಂಗರತ್ನಮ್ಮ, ಮುನಿಕೃಷ್ಣಪ್ಪ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜು, ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -