ಬರಗಾಲ ಪೀಡಿತ ಪ್ರದೇಶಗಳಲ್ಲಿನ ಜನರ ಕುಡಿಯುವ ನೀರು ಹಾಗೂ ಮೇವುಗಳ ಬವಣೆಯನ್ನು ನೀಗಿಸುವ ಸಲುವಾಗಿ ಅಗತ್ಯವಾಗಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲ್ಲೂಕಿನ ದೊಡ್ಡದಾಸರಹಳ್ಳಿ ಗ್ರಾಮದಲ್ಲಿ ಬರಗಾಲ ಅಧ್ಯಯನದ ಸಲುವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.
ಜಿಲ್ಲೆಯ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ತಾಲ್ಲೂಕುಗಳಿಗೆ ಬರಗಾಲದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದು, ಶಿಡ್ಲಘಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ, ಈ ಬಗ್ಗೆ ಅಧಿಕಾರಿಗಳಿಂದ ಅಗತ್ಯವಾಗಿರುವ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ, ಇಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ಅಗತ್ಯವಾಗಿರುವ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ, ಇಲ್ಲಿನ ಜನರು ಧೃತಿಗೆಡಬಾರದು ಎಂದರು.
ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ನಗರಕ್ಕೆ ಆಗಮಿಸುವ ಮಾರ್ಗಮಧ್ಯೆ ಹಂಡಿಗನಾಳ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ಆಗಮಿಸಿದ ಸಚಿವರುಗಳ ತಂಡವನ್ನು ಹಾರ ತುರಾಯಿಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು, ಈ ವೇಳೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಂದ ತಾಲ್ಲೂಕಿನ ಚಿತ್ರಣದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಂಕಿಅಂಶಗಳನ್ನು ಪಡೆದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಮುನಿಯಪ್ಪ, ತಾಲ್ಲೂಕಿನಲ್ಲಿನ ಬರಗಾಲವನ್ನು ನೀಗಿಸಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದರು.
ನಾರಾಯಣದಾಸರಹಳ್ಳಿಗೆ ಹೋಗದ ಸಚಿವರ ತಂಡ: ತಾಲ್ಲೂಕಿನಲ್ಲಿ ದೊಡ್ಡದಾಸರಹಳ್ಳಿ ಹಾಗೂ ನಾರಾಯಣದಾಸರಹಳ್ಳಿ ಗ್ರಾಮಗಳಲ್ಲಿ ಬರ ಅಧ್ಯಯನ ತಂಡ ಭೇಟಿ ನೀಡುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು, ಮಧ್ಯಾಹ್ನ ೧೨ ಗಂಟೆಗೆ ತಾಲ್ಲೂಕಿಗೆ ಆಗಮಿಸಬೇಕಾಗಿದ್ದ ತಂಡಕ್ಕಾಗಿ ರೈತ ಮುಖಂಡರು, ನೂರಾರು ಸಂಖ್ಯೆಯಲ್ಲಿ ನಾಗರಿಕರು ಕಾದಿದ್ದರು. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಮೇವುಗಳ ಸಮಸ್ಯೆ, ಹೇಳಿಕೊಳ್ಳಲು ಕಾಯುತ್ತಿದ್ದರಾದರೂ ಸುಮಾರು ೨ ಗಂಟೆಗೆ ಬಂದ ತಂಡ, ನೇರವಾಗಿ ದೊಡ್ಡದಾಸರಹಳ್ಳಿಗೆ ತೆರಳಿ ಅಲ್ಲಿನ ಜನರಿಂದ ಸಮಸ್ಯೆ ಆಲಿಸಿ, ಅಲ್ಲಿಂದ ನೇರವಾಗಿ ಚಿಂತಾಮಣಿಯ ಕಡೆಗೆ ತೆರಳಿದ್ದರಿಂದ ನೂರಾರು ಮಂದಿ ಜನರು, ರೈತ ಮುಖಂಡರು ನಿರಾಸೆಯಿಂದ ಹಿಂತಿರುಗಬೇಕಾಯಿತು.
ಕೆ.ಪಿ.ಸಿ.ಸಿ.ಅಧ್ಯಕ್ಷರಾಗುವಂತೆ ಕಾಂಗ್ರೆಸ್ ಮುಖಂಡರಿಂದ ಜೈಕಾರ: ಬರಗಾಲ ಅಧ್ಯಯನಕ್ಕೆ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಸಚಿವರುಗಳ ತಂಡ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ತಮ್ಮ ನಾಯಕ ವಿ.ಮುನಿಯಪ್ಪ ಸೇರಿದಂತೆ ಸಚಿವರುಗಳಿಗೆ ಜೈಕಾರಗಳನ್ನು ಕೂಗುವುದರ ಜೊತೆಗೆ ಡಿ.ಕೆ.ಶಿವಕುಮಾರ್ ಅವರು ಕೆ.ಪಿ.ಸಿ.ಸಿ ಅಧ್ಯಕ್ಷರಾಗಬೇಕು, ಎಂದು ಘೋಷಣೆಗಳನ್ನು ಕೂಗಿದರು.
ಕಂದಾಯ ಸಚಿವ ಶ್ರೀನಿವಾಸಪ್ರಸಾದ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ಬೇಗ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಮಾಜಿ ಶಾಸಕ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯರಾದಸತೀಶ್, ಪಿ.ನಿರ್ಮಲಾಮುನಿರಾಜು, ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -